ಬದಿಯಡ್ಕ: ನಮಗೆ ಸರ್ವಸ್ವವನ್ನೂ ಧಾರೆಯೆರೆದ ತಂದೆ ತಾಯಿಯರ ಕಣ್ಣೀರ ಧಾರೆ ನೆಲಸೋಕದಂತಹ ಜೀವನವನ್ನು ನಡೆಸಲು ನಾವು ಬದ್ಧರಾಗಿರಬೇಕು. ನಮ್ಮ ಗುರಿಯನ್ನು ಮರೆತರೆ ಅದು ನರಕಕ್ಕೆ ದಾರಿಯಾಗುತ್ತದೆ. ಬುದ್ಧಿಯನ್ನು ವಿಸ್ತರಿಸಿ ಯೋಜನೆ, ಯೋಚನೆಯಿಂದ ಸುಂದರವಾದ ಜೀವನವನ್ನು ನಡೆಸಲು ಸಾಧ್ಯವಿದೆ ಎಂದು ವಿಶ್ವಹಿಂದೂ ಪರಿಷತ್ ಕಣ್ಣೂರು ವಿಭಾಗ ಮಾತೃಶಕ್ತಿ ಪ್ರಮುಖ್ ಮೀರಾ ಆಳ್ವ ಹೇಳಿದರು.
ಭಾನುವಾರ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ವಿಶ್ವಹಿಂದೂ ಪರಿಷತ್ ಕೇರಳ ಘಟಕದ ದುರ್ಗಾವಾಹಿನಿ ಶೌರ್ಯ ಪ್ರಶಿಕ್ಷಣಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಉತ್ತಮವಾದ ಜೀವನವನ್ನು ನಡೆಸಲು ರಾಕ್ಷಸೀಪ್ರವೃತ್ತಿಗಳ ಮನಸ್ಸುಗಳುಳ್ಳವರ ಹೆಡೆಮುರಿಕಟ್ಟುವ ಮನಮಾಡಬೇಕು. ಸಾಮಾಜಿಕ ಜಾಲತಾಣಗಳು ಇಂದಿನ ಕಾಲದಲ್ಲಿ ಅನಿವಾರ್ಯ ಹಾಗೂ ಅಗತ್ಯವೂ ಆಗಿದೆ. ಆದರೆ ಅದು ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ವಿವಿಧ ಚಟಗಳಿಗೆ ಬಲಿಯಾಗುತ್ತಿರುವ ನಮ್ಮ ಸಹೋದರ ಸಹೋದರಿಯರನ್ನು ಆ ಚಟದಿಂದ ಹೊರತರಬೇಕು. ಆಸೆ, ಆಮಿಷ, ಆಕರ್ಷಣೆಗೆ ಒಳಗಾಗದೆ ಮಾತೃಋಣ, ಪಿತೃಋಣ, ಧರ್ಮ ಋಣವನ್ನು ತೀರಿಸಿ ಸಮಾಜದ ಶಕ್ತಿಯಾಗಿ ಬಾಳಬೇಕು ಎಂದರು.
ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಉದ್ಯಮಿ ರಾಜೇಶ್ ಮಜಕ್ಕಾರು ಮಾತನಾಡಿ ಕಟುಕನನ್ನೂ ಸೋಲಿಸುವ ಶಕ್ತಿ ನಾರಿಗಿದೆ. ನಾವು ಎಲ್ಲಿದ್ದರೂ ನಮ್ಮ ನಮ್ಮ ಕೆಲಸವನ್ನು ನಾವು ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಈ ಶಿಬಿರದಲ್ಲಿ ೀಶಕ್ತಿಯನ್ನು ಪಡೆದುಕೊಂಡ ನೀವು ಸಮಾಜದಲ್ಲಿ ಶಕ್ತಿರೂಪಿಣಿಗಳಾಗಿ ಸನಾತನ ಧರ್ಮಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಎಂದರು.
ವಿಶ್ವಹಿಂದೂಪರಿಷತ್ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ್‍ಜಿ ಮಾತನಾಡಿ ಶಕ್ತಿ ಇದ್ದರೆ ನಾವು ಶಿವನಿಗೆ ಸಮಾನ, ಶಕ್ತಿ ಇಲ್ಲದಿದ್ದರೆ ಶವಕ್ಕೆ ಸಮಾನ ಆದುದರಿಂದ ಶಕ್ತಿಶಾಲಿಗಳಾಗಿ ನಾವು ಹೊರಹೊಮ್ಮಬೇಕು ಎಂದರು. ಶಿಬಿರದ ವೈದ್ಯಾಕಾರಿಯಾಗಿ ಸೇವೆ ಸಲ್ಲಿಸಿದ ಡಾ. ಮಾಲತಿ ಪ್ರಕಾಶ್ ಮಾತನಾಡಿ ಬೇರು ಗಟ್ಟಿಯಾಗಿದ್ದರೆ ಮಾತ್ರ ಗಿಡವು ಸಮೃದ್ಧವಾಗಿ ಬೆಳೆಯಲು ಸಾಧ್ಯವಿದೆ. ಗಿಡಕ್ಕೆ ಬೇರು ಇದ್ದಂತೆ ಕುಟುಂಬಕ್ಕೆ ಸ್ತ್ರೀ ಇರಬೇಕು. ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಲಿಷ್ಠರಾಗಲು ಉತ್ತಮ ಆಹಾರವನ್ನು ನಾವು ಸೇವಿಸಬೇಕು. ಮಹಾನ್ ಸಾಧಕರ ಕಥೆಗಳನ್ನು ನಾವು ತಿಳಿಯಬೇಕು. ಕಷ್ಟದ ಜೀವನದ ಹೇಗೆ ನಿಭಾಯಿಸಬಹುದು ಎಂಬುದನ್ನೂ ಮಕ್ಕಳಿಗೆ ಎಳವೆಯಲ್ಲಿಯೇ ತಿಳಿಸಬೇಕು ಎಂದರು.
ಶಿಬಿರದ ಸಂಚಾಲಕಿ ಜಯಶರ್ಮಿಳ, ಶಿಬಿರದ ಶಿಕ್ಷಕಿ ಕೇರಳ ಪ್ರಾಂತ್ಯ ದುರ್ಗಾವಾಹಿನಿ ಸಹಸಂಚಾಲಕಿ ಕುಮಾರಿ ಮೀರಾಜಿ ಉಪಸ್ಥಿತರಿದ್ದರು. ವಿಶ್ವಹಿಂದೂಪರಿಷತ್ ಜಿಲ್ಲಾ ಕೋಶಾಧಿಕಾರಿ ಪದ್ಮಾ ಮೋಹನ್‍ದಾಸ್ ನಿರೂಪಿಸಿದರು. ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಸೌಮ್ಯಾ ಪ್ರಕಾಶ್ ಸ್ವಾಗತಿಸಿ, ಮಾತೃಶಕ್ತಿ ಜಿಲ್ಲಾ ಪ್ರಮುಖ್ ಹರಿಣಿ ನಾಯಕ್ ವಂದಿಸಿದರು. 9 ದಿನಗಳ ಕಾಲ ನಡೆದ ಶಿಬಿರದಲ್ಲಿ ಕೇರಳ ರಾಜ್ಯದ ತಿರುವನಂತಪುರದಿಂದ ಕಾಸರಗೋಡು ತನಕದ ವಿವಿಧೆಡೆಗಳಿಂದ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.