HEALTH TIPS

ಸಾಕುಪ್ರಾಣಿಗಳಿಗೂ 'ಮ್ಯಾಟ್ರಿಮನಿ' ಪೋರ್ಟಲ್

           ತಿರುವನಂತಪುರ: ಸಾಕುಪ್ರಾಣಿಗಳಿಗೆ ಸರಿಯಾದ ಸಂಗಾತಿಯನ್ನು ಅರಸುವುದು ಕೇರಳದಲ್ಲಿ ಇನ್ನು ಮುಂದೆ ಕಷ್ಟದ ಕೆಲಸ ಆಗಲಿಕ್ಕಿಲ್ಲ. ಏಕೆಂದರೆ, ಸಾಕುಪ್ರಾಣಿಗಳಿಗೆ ಸಂಗಾತಿಯನ್ನು ಹುಡುಕಿಕೊಡುವ (ಮ್ಯಾಟ್ರಿಮನಿ) ಪೋರ್ಟಲ್‌ ಒಂದನ್ನು ರಾಜ್ಯದಲ್ಲಿ ಈಗ ಆರಂಭಿಸಲಾಗಿದೆ! ಈ ಪೋರ್ಟಲ್‌ನಲ್ಲಿ ಸಾಕುಪ್ರಾಣಿಗಳ ಫೋಟೊ ಹಾಗೂ ಅವುಗಳ ಕುರಿತ ಒಂದಿಷ್ಟು ವಿವರಗಳು ಕೂಡ ಇರಲಿವೆ.

            ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ (ಕೆವಿಎಎಸ್‌ಯು) ವಿದ್ಯಾರ್ಥಿಯೊಬ್ಬರ ಆಲೋಚನೆ ಈ ಪೋರ್ಟಲ್‌ನ ಹಿಂದೆ ಇದೆ. ಪೋರ್ಟಲ್‌ ಆರಂಭಿಸುವುದಕ್ಕೆ ವಿಶ್ವವಿದ್ಯಾಲಯದ ಬೆಂಬಲ ಕೂಡ ಇದೆ. vet-igo.in ವೆಬ್ ವಿಳಾಸ ಹೊಂದಿರುವ ಈ ಪೋರ್ಟಲ್‌ ಸದ್ಯಕ್ಕೆ ಸಾಕುನಾಯಿಗಳಿಗೆ ಮಾತ್ರ ಸಂಗಾತಿಗಳನ್ನು ಅರಸಲು ನೆರವು ನೀಡುತ್ತದೆ.

             ಮುಂದಿನ ದಿನಗಳಲ್ಲಿ ಇದು ಬೆಕ್ಕುಗಳಿಗೆ ಸಂಗಾತಿ ಹುಡುಕಿಕೊಡಲಿಕ್ಕೂ ನೆರವು ಒದಗಿಸಲಿದೆ, ಆನ್‌ಲೈನ್‌ ಮೂಲಕ ಪಶುವೈದ್ಯಕೀಯ ಸಮಾಲೋಚನೆಯ ಸೇವೆಯನ್ನೂ ನೀಡಲಿದೆ ಎಂದು ಪೋರ್ಟಲ್‌ನ ರೂವಾರಿ ಅಬಿನ್ ಜಾಯ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

               ಜಾಯ್ ಅವರು ಪ‍ಶುವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಈಗ ಅವರು ಇಂಟರ್ನ್‌ಶಿಪ್‌ ನಲ್ಲಿ ತೊಡಗಿಸಿಕೊಂಡಿದ್ದಾರೆ. ತಾವು ಆರಂಭಿಸಿರುವುದು ಕೇರಳದಲ್ಲಿ ಸಾಕುಪ್ರಾಣಿಗಳಿಗೆ ಸಂಗಾತಿ ಅರಸಲು ಮೀಸಲಾಗಿರುವ ಮೊದಲ ಪೋರ್ಟಲ್ ಆಗಿರಬಹುದು ಎಂದು ಅವರು ತಿಳಿಸಿದರು. ಇತರ ರಾಜ್ಯಗಳಲ್ಲಿಯೂ ಇಂಥದ್ದೊಂದು ಪೋರ್ಟಲ್ ಇರಲಿಕ್ಕಿಲ್ಲ ಎಂದರು.

ಸಾಕುಪ್ರಾಣಿಗಳ ಸಂಪರ್ಕಕ್ಕೆ ಮಾಲೀಕರಿಗೆ ನೆರವಾಗುವ ಕೆಲವು ಆನ್‌ಲೈನ್‌ ವೇದಿಕೆಗಳು ಈಗಾಗಲೇ ಇವೆ. ಆದರೆ ಈ ವೇದಿಕೆಗಳು ಫೋಟೊಗಳನ್ನು ಪ್ರಕಟಿಸುತ್ತಿಲ್ಲ. ಹೀಗಾಗಿ, ಸಾಕುಪ್ರಾಣಿಗಳ ಫೋಟೊ ಹಾಗೂ ಕೆಲವು ವಿವರಗಳನ್ನು ಹೊಂದಿರುವ vet-igo.in ಪೋರ್ಟಲ್‌ ಅವುಗಳಿಗೆ ಸೂಕ್ತವಾದ ಸಂಗಾತಿಯನ್ನು ಗೊತ್ತುಮಾಡುವ ಕೆಲಸವನ್ನು ಮಾಲೀಕರಿಗೆ ಸುಲಭವಾಗಿಸಿಕೊಡುತ್ತದೆ.

'ಸಾಕುಪ್ರಾಣಿಗಳಿಗೆ ದೈಹಿಕ ಸಂಪರ್ಕಕ್ಕೆ ಸೂಕ್ತ ಸಂಗಾತಿ ಅರಸಬೇಕು, ನೆರವು ಕೊಡಿ ಎಂದು ಹಲವರು ನನ್ನಲ್ಲಿ ಕೇಳಿದ್ದಿದೆ. ಆಗ ಈ ಆಲೋಚನೆ ನನ್ನಲ್ಲಿ ಮೂಡಿತು' ಎಂದು ಅವರು ತಿಳಿಸಿದರು.

               ಸಾಕುಪ್ರಾಣಿಗಳ ಮಾಲೀಕರು vet-igo.in ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿ, ತಮ್ಮಲ್ಲಿರುವ ಸಾಕುಪ್ರಾಣಿಗಳ ಫೋಟೊ ಹಾಗೂ ಕೆಲವು ವಿವರಗಳನ್ನು ಸಲ್ಲಿಸಬೇಕು. ಸದ್ಯಕ್ಕೆ ಇಲ್ಲಿ ಐವತ್ತು ಸಾಕುಪ್ರಾಣಿಗಳ ವಿವರ ಇದೆ. ಇದರ ಬಗ್ಗೆ ಪ್ರಚಾರ ಸಿಕ್ಕಂತೆಲ್ಲ ಇನ್ನಷ್ಟು ಮಂದಿ ನೋಂದಾಯಿಸಿ ಕೊಳ್ಳಬಹುದು ಎಂಬ ನಿರೀಕ್ಷೆಯನ್ನು ಜಾಯ್ ಹೊಂದಿದ್ದಾರೆ.

* ಕೇರಳದ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಪ್ರಯತ್ನ 

* ಸದ್ಯಕ್ಕೆ ಇದು ಸಾಕುನಾಯಿಗಳಿಗೆ ಮಾತ್ರ ಸಂಗಾತಿ ಹುಡುಕಿಕೊಡಲಿದೆ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries