ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಸ್ವಂತ ಪಕ್ಷದವರೇ ಹಣ ಲೂಟಿಮಾಡಿದ್ದಾರೆ ಎಂದು ಕಾಸರಗೋಡು ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಆರೋಪಿಸಿದ್ದಾರೆ.
ಬೂತ್ ಸಮಿತಿಗಳಿಗೆ ಕೊಡಬೇಕಾದ ಹಣವನ್ನು ಕ್ಷೇತ್ರದ ಅಧ್ಯಕ್ಷರೇ ದೋಚಿದ್ದಾರೆ.ಇದೆಲ್ಲ ತನಗೆ ಗೊತ್ತು, ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಡಿಸಿಸಿ ಕಚೇರಿಯಲ್ಲಿ ನಡೆದ ಪೆರಿಯ ಗಂಗಾಧರನ್ ನಾಯರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಈ ವಿಷಯ ಬಹಿರಂಗವಾಗಿದೆ. ವೇದಿಕೆಯಲ್ಲಿ ಯುಡಿಎಫ್ ಸಂಚಾಲಕ ಎಂ.ಎಂ.ಹಸನ್ ಕೂಡ ಉಪಸ್ಥಿತರಿದ್ದರು.
ಚುನಾವಣಾ ಪ್ರಚಾರಕ್ಕಾಗಿ ಕ್ಷೇತ್ರ ಮತ್ತು ಬ್ಲಾಕ್ ಅಧ್ಯಕ್ಷರಿಗೆ ಮತ್ತು ಯುಡಿಎಫ್‍ಗೆ ಸಾಕಷ್ಟು ಹಣ ನೀಡಲಾಗಿದೆ. ಆದರೆ ಕೆಲವು ಕ್ಷೇತ್ರದ ಅಧ್ಯಕ್ಷರು ಬೂತ್ ಕಮಿಟಿಗಳಿಗೆ ನೀಡಿದ ಹಣವನ್ನು ಮುಳುಗಿಸಿದ್ದಾರೆ. ಈ ಬಗ್ಗೆ ಡಿಸಿಸಿ ಅಧ್ಯಕ್ಷರಿಗೂ ಅರಿವಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾಯಕತ್ವ ಸಿದ್ಧವಾಗಬೇಕಿದೆ ಎಂದರು.
ಅನೇಕರು ತನ್ನನ್ನು ಪರಾಭವಗೊಳಿಸಲು ಪ್ರಯತ್ನಿಸಿರುವರು. ಚುನಾವಣೆಯ ಫಲಿತಾಂಶದ ಬಳಿಕ ಇನ್ನೂ ಕೆಲವು ವಿಷಯಗಳನ್ನು ಹೇಳಬೇಕಾಗಿದೆ ಎಂದು ರಾಜ್‍ಮೋಹನ್ ಉಣ್ಣಿತ್ತಾನ್ ಬಾಂಬ್ ಸಿಡಿಸಿರುವರು.
ಉಣ್ಣಿತ್ತಾನ್ ಅವರ ಈ ಹೇಳಿಕೆಗಳು ವೀಡಿಯೋ ಮೂಲಕ ಹೊರಬಿದ್ದಿದೆ. ಕಾಂಗ್ರೆಸ್ ಕಾರ್ಯಕರ್ತರು ಭಾಷಣವನ್ನು ಕ್ಯಾಮರಾದಲ್ಲಿ ಚಿತ್ರೀಕರಿಸುತ್ತಿದ್ದರು. ಭಾಷಣದ ವೇಳೆ ಇದನ್ನು ಗಮನಿಸಿದ ಹಾಲಿ ಸಂಸದರು ಧ್ವನಿಮುದ್ರಣ ನಿಲ್ಲಿಸುವಂತೆ ಹಾಗೂ ಚಿತ್ರೀಕರಿಸಿದ ಭಾಗವನ್ನು ಅಳಿಸಿ ಹಾಕುವಂತೆ ತಿಳಿಸಿದರು. ಈ ವಿಡಿಯೋ ಇದೀಗ ಹೊರಬಂದಿದೆ.
ಕಾಸರಗೋಡು ಕ್ಷೇತ್ರ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಎನ್‍ಡಿಎಯಿಂದ ಎಂಎಲ್ ಅಶ್ವಿನಿ, ಎಲ್‍ಡಿಎಫ್ ನಿಂದ ಎಂವಿ ಬಾಲಕೃಷ್ಣನ್ ಮತ್ತಯ ಯುಡಿಎಫ್ ನಿಂದ ಉಣ್ಣಿತ್ತಾನ್ ಸ್ಪರ್ಧಿಸಿದ್ದರು.