ಕಾಸರಗೋಡು: ಬೇಸಿಗೆ ಮಳೆಗೆ ಜಿಲ್ಲೆಯ ವಿವಿಧೆಡೆ ಅಪಾರ ಹಾನಿ ಉಂಟಗಿದೆ. ಸಿಡಿಲಿನ ಆಘಾತದಿಂದ ಪೈವಳಿಕೆ ಪಂಚಾಯಿತಿಯ ಕಯ್ಯಾರು ಬೊಳಂಪಾಡಿಯಲ್ಲಿ ತಾಯಿ ಮತ್ತು ಅವರ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಇವರ ಮನೆಗೂ ಹಾನಿಯುಂಟಾಗಿದೆ. ಇಲ್ಲಿನ ನಿವಾಸಿ ಯಮುನಾ, ಮಕ್ಕಳಾದ ಪ್ರಮೋದ್ ಹಾಗೂ ಸುಧೀರ್ ಗಾಯಾಳುಗಳು. ಇವರನ್ನು ಉಪ್ಪಳದ ಆಸ್ಪತ್ರೆಗೆ ದಾಖಲಿಸಲಾಘಿದೆ. ಇವರು ಇತ್ತೀಚೆಗಷ್ಟೆ ನಿರ್ಮಿಸಿದ ಕಾಂಕ್ರೀಟ್ ಮನೆ ಗೋಡೆ ಬಿರುಕು ಬಿಟ್ಟಿದ್ದು, ವಯರಿಂಗ್ ಉರಿದು ಹಾನಿಗೀಡಾಗಿದೆ. ಸನಿಹದ ಹೆಂಚುಹಾಸಿನ ಮನೆಯೊಂದಕ್ಕೂ ಹಾನಿಯುಂಟಾಗಿದೆ.
ಮನೆ ಕುಸಿತ:
ಬಿರುಸಿನ ಮಳೆಗೆ ಬಂದಡ್ಕ ಕೊಕ್ಕೆಚ್ಚಾಲ್ ನಿವಾಸಿ ಶಾಂಭವಿಶಂಕರ್ ಎಂಬವರ ಮನೆ ಕುಸಿದು ಬಿದ್ದಿದ್ದು ಇಬ್ಬರು ಗಾಯಗೊಂಡಿದ್ದಾರೆ. ಶಾಂಭವಿ ಹಾಗೂ ಇವರ ಮೊಮ್ಮಗ ವಿಶಾಕ್ ಗಾಯಾಳುಗಳು. ಮನೆಯ ಮೇಲ್ಚಾವಣಿ ಕುಸಿದು ಬೀಳುವ ಶಬ್ದ ಕೇಳುತ್ತಿದ್ದಂತೆ ಇವರು ಮನೆಯಿಂದ ಹೊರಕ್ಕೆ ಧಾವಿಸಲು ಯತ್ನಿಸಿದರೂ, ಮಹದಿ ಕುಸಿದು ಇವರ ತಲೆಗೆ ಗಾಯಗಳುಂಟಾಗಿದೆ. ಗಾಯಾಳುಗಳನ್ನು ಹೊಸದುರ್ಗದ ಜಿಲ್ಲಾ ಸಹಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸದುರ್ಗ ಮಡಿಕೈ ನಿವಾಸಿ ಪುಷ್ಪಾ ಎಂಬವರ ಹೆಂಚುಹಾಸಿನ ಮನೆ ಬಿರುಸಿನ ಮಳೆಗೆ ಕುಸಿದು ಬಿದ್ದಿದೆ. ಈ ಸಂದರ್ಭ ಪುಷ್ಪಾ, ಅವರ ಪತಿ ದಿನೇಶ್ ಹಾಗೂ ಪುತ್ರ ಹೊರಕ್ಕೆ ಧಾವಿಸಿರುವುದರಿಂದ ಅಪಾಯದಿಂದ ಪಾರಾಗಿದ್ದಾರೆ.
ಮಡಿಕೈಯಲ್ಲಿ ಸಿಡಿಲಿನ ಆಘಾತಕ್ಕೆ ವ್ಯಕ್ತಿ ಬಲಿ
ಸಿಡಿಲಿನ ಆಘಾತದಿಂದ ಮಡಿಕೈ ಬಂಗಳಂ ಪುದಿಯಕಂಡ ನಿವಾಸಿ ಬಾಲನ್(70)ಮೃತಪಟ್ಟಿದ್ದಾರೆ. ಬುಧವಾರ ಬಿರುಸಿನ ಮಳೆಯೊಂದಿಗೆ ಭಾರಿ ಸಿಡಿಲು ಉಂಟಾಗಿದ್ದು, ಇದರ ಆಘಾತದಿಂದ ಬಾಲನ್ ಮೃತಪಟ್ಟಿದ್ದಾರೆ. ಮಧ್ಯಾಹ್ನ ಮನೆಸನಿಹದ ಪಂಪು ಶೆಡ್ಡಿಗೆ ತೆರಳಿದ್ದ ಇವರು, ಬಹಳ ಹೊತ್ತಿನ ವರೆಗೂ ವಾಪಸಾಗದಿರುವುದರಿಂದ ಹುಡುಕಾಡುವ ಮಧ್ಯೆ ಪಂಪುಹೌಸ್ ಬಳಿ ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಯತ್ನದ ಮಧ್ಯೆ ಸಾವು ಸಂಭವಿಸಿತ್ತು.