ಕಾಸರಗೋಡು: ಸಿಪಿಎಂ ಅಧೀನದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ವಂಚನಾ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಕಾಸರಗೋಡಿನ ಸಹಕಾರಿ ಇಲಾಖೆ ಜೆ.ಆರ್ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿ ವಠಾರದಿಂದ ಮಹಿಳೆಯರು ಸೇರಿದಂತೆ ನೂರಾರು ಮಂದಿ ಜಿಲ್ಲಾಧಿಕಾರಿ ಕಚೇರಿ ವಠಾರದ ಜೆ.ಆರ್ ಕಚೇರಿ ವರೆಗೆ ಮೆರವಣಿಗೆಯಲ್ಲಿ ಸಾಗಿ ಧರಣಿ ನಡೆಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಧರಣಿ ಉದ್ಘಾಟಿಸಿ ಮಾತನಾಡಿ, ಗ್ರಾಹಕರ ಲಕ್ಷಾಂತರ ರೂ. ಮೊತ್ತವನ್ನು ವಂಚಿಸುವ ಮೂಲಕ ಸಿಪಿಎಂ ನೇತೃತ್ವದ ಬ್ಯಾಂಕ್ ಆಡಳಿತ ಮಂಡಳಿ ಬಡ ಜನತೆಯನ್ನು ವಂಚಿಸಿದೆ. ಸಿಪಿಎಂ ಅಧೀನದಲ್ಲಿರುವ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ. ವಂಚನಾ ತಂಡಗಳಿಗೆ ಆಡಳಿತ ಪಕ್ಷದ ಸಂಪೂರ್ಣ ಸಹಕಾರವಿರುವುದರಿಂದ ನಿಷ್ಪಕ್ಷಪಾತ ತನಿಖೆ ಮರೀಚಿಕೆಯಾಗಲಿದೆ. ಪ್ರತ್ಯೇಕ ತಂಡದಿಂದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯಗುವಂತೆ ಮಾಡಬೇಕು ಎಂದು ತಿಳಿಸಿದರು.
ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ. ನೀಲಕಂಠನ್, ಕೆ.ಪಿ ಕುಞÂಕಣ್ಣನ್, ಹಾಕಿಂ ಕುನ್ನಿಲ್, ಕರುಣ್ ಥಾಪಾ, ಜೆ.ಎಸ್ ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು. ಎಂ.ಸಿ ಪ್ರಭಾಕರನ್ ಸ್ವಾಗತಿಸಿದರು.