ನವದೆಹಲಿ: ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆಣತಿಯ ಮೇರೆಗೆ ಪೊಲೀಸರು ಕಿರುಕುಳ ನೀಡಿ ಬೆದರಿಕೆ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಮಿತ್ ಶಾ ಅವರ ತಿರುಚಿದ ವಿಡಿಯೊ ಅಪ್ಲೋಡ್ ಮಾಡಿದ ಮತ್ತು ಹರಡಿದ ಆರೋಪದ ಮೇಲೆ ದೆಹಲಿ ಪೊಲೀಸರ ವಿಶೇಷ ವಿಭಾಗವು ಕಾಂಗ್ರೆಸ್ ಮಾಧ್ಯಮ ತಂಡದ ರಾಷ್ಟ್ರೀಯ ಸಂಯೋಜಕರನ್ನು ಬಂಧಿಸಿತ್ತು.
ಪಕ್ಷದ ರಾಷ್ಟ್ರೀಯ ವಕ್ತಾರರಾದ ಸುಪ್ರಿಯಾ ಶ್ರೀನೆತ್ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದರು.'ನರೇಂದ್ರ ಮೋದಿ ಮತ್ತು ಅಮಿತ್ ಶಾ ತಮ್ಮ ಕಣ್ಣಮುಂದೆ ಸೋಲನ್ನು ಕಾಣುತ್ತಿದ್ದಾರೆ. ಹೀಗಾಗಿ, ಅವರ ಸೂಚನೆಯ ಮೇರೆಗೆ ಪಕ್ಷದ ಸಾಮಾಜಿಕ ಜಾಲತಾಣದ ಸಿಬ್ಬಂದಿಗೆ ಕಿರುಕುಳ ನೀಡಲಾಗಿದ್ದು, ಅವರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಮೋದಿ ಮತ್ತು ಶಾ ಅವರ ಭಯ ಮತ್ತು ಹೇಡಿತನವನ್ನು ತೋರಿಸುತ್ತದೆ' ಎಂದು ವಾಗ್ದಾಳಿ ನಡೆಸಿದರು.
'ಜಗತ್ತಿನ ಅತ್ಯಂತ ದೊಡ್ಡ ಸುಳ್ಳು ಸುದ್ದಿಯ ಕಾರ್ಖಾನೆ ನಡೆಸುವ ಪ್ರಧಾನಿ ಮತ್ತು ಅದರ ಬಗ್ಗೆ ಜಂಬ ಕೊಚ್ಚಿಕೊಳ್ಳುವ ಗೃಹ ಸಚಿವರು ಹೆದರಿದ್ದಾರೆ' ಎಂದು ಹೇಳಿದರು.
'ನಿಮಗೆ ಧೈರ್ಯ ಇದ್ದರೆ ರಾಜಕೀಯವಾಗಿ ಹೋರಾಟ ನಡೆಸಿ' ಎಂದು ಸವಾಲು ಹಾಕಿದರು.