ನವದೆಹಲಿ: ತನ್ನ ಗರ್ಭಿಣಿ ಪತ್ನಿಯ ಗರ್ಭದಲ್ಲಿರುವುದು ಗಂಡು ಅಥವಾ ಹೆಣ್ಣು ಮಗುವೊ ಎಂಬುದನ್ನು ತಿಳಿಯಲು ಕುಡಗೋಲಿನಿಂದ ಪತ್ನಿಯ ಹೊಟ್ಟೆಯನ್ನು ಇರಿದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಉತ್ತರ ಪ್ರದೇಶದ ಬದೌನಿನ ಸಿವಿಲ್ ಲೈನ್ಸ್‌ನ ನಿವಾಸಿ ಪನ್ನಾ ಲಾಲ್ ಎಂಬಾತ 2020ರ ಸೆಪ್ಟೆಂಬರ್‌ನಲ್ಲಿ ತನ್ನ ಪತ್ನಿ ಅನಿತಾ ಅವರ ಮೇಲೆ ಹಲ್ಲೆ ನಡೆಸಿದ್ದ.
ಮದುವೆಯಾಗಿ 22 ವರ್ಷಗಳಾಗಿರುವ ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದಾರೆ. ಆದರೆ ಪನ್ನಾ ಲಾಲ್‌ಗೆ ಪುತ್ರ ವ್ಯಾಮೋಹ. ಇದಕ್ಕಾಗಿ ಪದೇ ಪದೇ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಈ ವಿಷಯ ಅನಿತಾ ಅವರ ಕುಟುಂಬಕ್ಕೂ ತಿಳಿದಿತ್ತು. ಅವರೂ ಪನ್ನಾ ಅವರ ಮನವೊಲಿಸಲು ಯತ್ನಿಸಿದ್ದರು. ಆದರೆ ತಾನು ವಿಚ್ಛೇದನ ನೀಡಿ, ಮತ್ತೊಬ್ಬ ಮಹಿಳೆಯನ್ನು ವಿವಾಹವಾಗುವುದಾಗಿ ಪನ್ನಾ ಬೆದರಿಕೆ ಹಾಕಿದ್ದ.
ಘಟನೆ ನಡೆದ ದಿನ ದಂಪತಿಗಳು ಗರ್ಭದಲ್ಲಿರುವ ಮಗುವಿನ ಲಿಂಗದ ಬಗ್ಗೆ ಪುನಃ ಜಗಳವಾಡಿದ್ದರು. ಆಗ ಅನಿತಾ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಮಾತಿಗೆ ಮಾತು ಜೋರಾದಾಗ ಕುಪಿತಗೊಂಡ ಪನ್ನಾ, ಪತ್ನಿಯ ಹೊಟ್ಟೆಯನ್ನು ಕತ್ತರಿಸಿ ಯಾವ ಮಗು ಇದೆ ಎಂಬುದನ್ನು ಪರೀಕ್ಷಿಸುವುದಾಗಿ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ಕುಡುಗೋಲಿನಿಂದ ಪತ್ನಿಯ ಹೊಟ್ಟೆಯನ್ನೂ ಇರಿದ. ಇದರಿಂದ, ಅನಿತಾ ಅವರ ಕರುಳು ಹೊರಗೆ ನೇತಾಡಲಾರಂಭಿಸಿತು.
ನೋವು ತಾಳಲಾರದೆ ಅನಿತಾ ಅವರು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಹೋದರು. ಸಮೀಪದಲ್ಲಿಯೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರ ಸಹೋದರ ರಕ್ಷಣೆಗೆ ಧಾವಿಸಿ ಬಂದರು. ಅವರನ್ನು ಕಂಡ ಕೂಡಲೇ ಪನ್ನಾ ಸ್ಥಳದಿಂದ ಪರಾರಿಯಾದ. ಬಳಿಕ ಅನಿತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ದಾಳಿಯಿಂದ ಅವರು ಬುದುಕುಳಿದರೂ, ಅವರ ಗರ್ಭದಲ್ಲಿದ್ದ ಗಂಡು ಮಗು ಉಳಿಯಲಿಲ್ಲ. ಈ ವಿಷಯವನ್ನು ಅನಿತಾ ಅವರೇ ನ್ಯಾಯಾಲಯಕ್ಕೆ ತಿಳಿಸಿದರು. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.