India Today ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ನಾನೆಂದೂ ಸಂದರ್ಶನಗಳನ್ನು ನೀಡಲು ನಿರಾಕರಿಸಿಲ್ಲ ಎಂದು ಹೇಳಿದ್ದು, ಮಾಧ್ಯಮಗಳ ಹೊಣೆಗಾರಿಕೆ ಪಾತ್ರದಲ್ಲಿನ ಬದಲಾವಣೆ ಹಾಗೂ ಸಾರ್ವಜನಿಕರನ್ನು ತಲುಪಲು ಇರುವ ಹಲವು ಸಂವಹನ ಮಾರ್ಗಗಳ ಕುರಿತು ಒತ್ತಿ ಹೇಳಿದ್ದಾರೆ. ಇಂದಿನ ಮಾಧ್ಯಮಗಳು ಈ ಹಿಂದಿನಂತಿಲ್ಲ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
"ನಾನು ಕಠಿಣ ಪರಿಶ್ರಮ ಪಡಬೇಕಿದೆ. ನಾನು ಬಡವರ ಮನೆಗಳಿಗೆ ಹೋಗಬೇಕಿದೆ. ನಾನು ವಿಜ್ಞಾನ ಭವನದಲ್ಲಿ ರಿಬ್ಬನ್ ಕತ್ತರಿಸಿ, ನನ್ನ ಭಾವಚಿತ್ರ ತೆಗೆಸಿಕೊಳ್ಳಬಹುದು. ಆದರೆ, ನಾನು ಹಾಗೆ ಮಾಡುವುದಿಲ್ಲ. ನಾನು ಜಾರ್ಖಂಡ್ ನ ಸಣ್ಣ ಜಿಲ್ಲೆಗೆ ಹೋಗುತ್ತೇನೆ ಹಾಗೂ ಅಲ್ಲಿ ಸಣ್ಣ ಯೋಜನೆಯ ಜಾರಿಗಾಗಿ ಕೆಲಸ ಮಾಡುತ್ತೇನೆ" ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾನು ಹೊಸ ಶ್ರಮ ಸಂಸ್ಕೃತಿಯನ್ನು ಪರಿಚಯಿಸಿದ್ದೇನೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, "ಒಂದು ವೇಳೆ ಆ ಸಂಸ್ಕೃತಿ ಸರಿಯೆನಿಸಿದರೆ ಅದನ್ನು ಮಾಧ್ಯಮಗಳು ಸೂಕ್ತವಾಗಿ ಮುಂದಿಡಲಿ, ಇಲ್ಲದಿದ್ದರೆ ಹಾಗೆ ಮಾಡುವುದು ಬೇಡ" ಎಂದೂ ಹೇಳಿದ್ದಾರೆ.
ಮಾಧ್ಯಮವಿಂದು ಪ್ರತ್ಯೇಕ ಘಟಕವಾಗಿ ಉಳದಿಲ್ಲ ಎಂಬುದನ್ನೂ ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.
"ಇದಕ್ಕೂ ಮುನ್ನ, ನಾನು ಆಜ್ ತಕ್ ನೊಂದಿಗೆ ಮಾತನಾಡುತ್ತಿದ್ದೆ. ಆದರೆ, ಈಗ ವೀಕ್ಷಕರಿಗೆ ನಾನು ಯಾವ ನಿರೂಪಕನೊಂದಿಗೆ ಮಾತನಾಡುತ್ತಿದ್ದೇನೆ ಎಂಬುದು ತಿಳಿಯುತ್ತದೆ. ಇಂದು ಮಾಧ್ಯಮಗಳು ಪ್ರತ್ಯೇಕ ಘಟಕಗಳಾಗಿ ಉಳಿದಿಲ್ಲ. ಇನ್ನಿತರ ಹಲವರಂತೆ, ನೀವೂ (ನಿರೂಪಕರು) ಕೂಡಾ ನಿಮ್ಮ ನಿಲುವುಗಳನ್ನು ಜನರಿಗೆ ತಿಳಿಯುವಂತೆ ಮಾಡುತ್ತಿದ್ದೀರಿ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಹಿಂದೆ ಮಾಧ್ಯಮಗಳು ಮಾತ್ರ ಸಂಹವನದ ಮೂಲಗಳಾಗಿದ್ದವು. ಆದರೀಗ ಹಲವಾರು ಸಂವಹನ ಮಾಧ್ಯಮಗಳು ಲಭ್ಯವಿವೆ" ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
"ಇಂದು ನೀವೇನಾದರೂ ಸಾರ್ವಜನಿಕರೊಂದಿಗೆ ಮಾತನಾಡಬೇಕಾದರೆ, ಸಂಹವನವು ದ್ವಿಮುಖವಾಗಿದೆ. ಇಂದು ಸಾರ್ವಜನಿಕರು ಮಾಧ್ಯಮಗಳಿಲ್ಲದೆಯೂ ತಮ್ಮ ಧ್ವನಿ ತಿಳಿಯುವಂತೆ ಮಾಡಬಹುದು. ಉತ್ತರಿಸಬೇಕಾದ ವ್ಯಕ್ತಿಯೂ ಕೂಡಾ ಮಾಧ್ಯುಮಗಳಿಲ್ಲದೆ ತನ್ನ ನಿಲುವುಗಳನ್ನು ಚೆನ್ನಾಗಿ ವ್ಯಕ್ತಪಡಿಸಬಹುದು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.