ಭುವನೇಶ್ವರ: ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಆಘಾತವೊಂದು ಎದುರಾಗಿದ್ದು, ಪ್ರಚಾರಕ್ಕೆ ಹಣವಿಲ್ಲ ಎಂಬ ಒಂದೇ ಕಾರಣಕ್ಕೆ ಪುರಿಯ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಹೌದು.. ಹಾಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರಂತರ ಹಿನ್ನಡೆ ಅನುಭವಿಸುತ್ತಿದ್ದು, ಸೂರತ್ ಮತ್ತು ಇಂದೋರ್ ನಂತರ, ಇದೀಗ ಒಡಿಶಾದ ಹಾಟ್ ಸೀಟ್ ಎಂದು ಪರಿಗಣಿಸಲಾಗಿದ್ದದ ಪುರಿಯ ಕಾಂಗ್ರೆಸ್ ಅಭ್ಯರ್ಥಿ (Congress Candidate) ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಪುರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸುಚರಿತ ಮೊಹಾಂತಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು.
ಆದರೆ ಸುಚರಿತಾ ಅವರು ತಮ್ಮ ಟಿಕೆಟ್ ವಾಪಸ್ ನೀಡಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಇದು ಕಾಂಗ್ರೆಸ್‌ಗೆ ದೊಡ್ಡ ಹೊಡೆತವಾಗಿದ್ದು, ಇಲ್ಲಿ ಬಿಜೆಪಿಯ ಹಿರಿಯ ನಾಯಕ ಸಂಬಿತ್ ಪಾತ್ರಾ ಬಿಜೆಪಿಯಿಂದ ಸ್ಪರ್ಧಿಸಿದ್ದು, ಇದೀಗ ಸುಚರಿತಾ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿರುವುದರಿಂದ ಸಂಬಿತ್ ಪಾತ್ರ ಗೆಲುವಿನ ಹಾದಿ ಸುಲಭವಾಗಿದೆ.
ಪ್ರಚಾರಕ್ಕೆ ಹಣವಿಲ್ಲ ಎಂದ ಕೈ ಅಭ್ಯರ್ಥಿ
ಇನ್ನು ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತ ಮೊಹಾಂತಿ ಅವರು ಹಣದ ಕೊರತೆಯ ಕಾರಣದಿಂದ ಮತದಾನಕ್ಕೂ ಮುನ್ನವೇ ಕ್ಷೇತ್ರ ತೊರೆದಿದ್ದಾರೆ. ಕಾಂಗ್ರೆಸ್ ಗೆ ತನ್ನ ಟಿಕೆಟ್ ವಾಪಾಸ್ ಮಾಡಿದ್ದಾರೆ. ಈ ಸಂಬಂಧ ಸುಚರಿತ ಮೊಹಾಂತಿ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಪತ್ರ ಬರೆದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.
'ಚುನಾವಣೆಗೆ ಸ್ಪರ್ಧಿಸಲು ಪಕ್ಷ ನೀಡಿರುವ ಮೊತ್ತವನ್ನು ತಮಗೆ ನೀಡಿಲ್ಲ ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಬರೆದಿರುವ ಪತ್ರ ತಿಳಿಸಿದ್ದಾರೆ. ಹಣದ ಕೊರತೆಯಿಂದ ಪ್ರಚಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.