ಕಾಕದ್ವೀಪ್/ಬಾರಿಪದಾ: ಒಳನುಸುಳಿವಿಕೆಯಿಂದ ಪಶ್ಚಿಮ ಬಂಗಾಳದ ಜನಸಂಖ್ಯಾ ಸ್ವರೂಪವು ಬದಲಾಗುತ್ತಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದೊಳಗೆ ಅಕ್ರಮವಾಗಿ ಪ್ರವೇಶ ಮಾಡಿದವರು ಸ್ಥಳೀಯ ಯುವಕರ ಅವಕಾಶಗಳನ್ನು ಕಸಿಯುತ್ತಿದ್ದಾರೆ ಎಂದು ಬುಧವಾರ ಆರೋಪಿಸಿದರು.
ಟಿಎಂಸಿ ಸರ್ಕಾರವು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಮೂಲ ಒಬಿಸಿ ಜನರ ಹಕ್ಕುಗಳನ್ನು ಮುಸ್ಲಿಮರಿಗೆ ನೀಡುತ್ತಿದೆ ಎಂದು ಪಶ್ಚಿಮ ಬಂಗಾಳದ ಕಾಕದ್ವೀಪ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಹೇಳಿದರು.
'ಧರ್ಮದ ಕಾರಣಕ್ಕೆ ಹೊರದೂಡಲ್ಪಟ್ಟ ಅಲ್ಪಸಂಖ್ಯಾತರಿಗೆ ಟಿಎಂಸಿ ಪೌರತ್ವ ನೀಡುತ್ತಿದೆ. ಅವರು ಸಿಎಎ ಅನ್ನು ಅಷ್ಟು ವಿರೋಧ ಮಾಡಲು ಕಾರಣವೇನು? ಸಿಎಎ ಬಗ್ಗೆ ಟಿಎಂಸಿ ಏಕೆ ಸುಳ್ಳು ಹೇಳುತ್ತಿದೆ' ಎಂದು ಪ್ರಶ್ನಿಸಿದರು.
'ಮತುವಾ ಸಮುದಾಯದ ಜನರಿಗೆ ಪೌರತ್ವ ಲಭಿಸಬೇಕಿದ್ದು, ಅದಕ್ಕೆ ಅವರು ಎಲ್ಲ ರೀತಿಯಲ್ಲೂ ಅರ್ಹರು' ಎಂದು ಅಭಿಪ್ರಾಯಪಟ್ಟರು.
'ಟಿಎಂಸಿ ಮತ್ತು 'ಇಂಡಿಯಾ' ಕೂಟ ಪಶ್ಚಿಮ ಬಂಗಾಳವನ್ನು ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ' ಎಂದ ಅವರು, 'ವಿಕಸಿತ ಭಾರತಕ್ಕಾಗಿ ವಿಕಸಿತ ಬಂಗಾಳ ಬೇಕು' ಎಂದು ಪ್ರತಿಪಾದಿಸಿದರು.
ನಂತರ ಒಡಿಶಾದ ಮಯೂರ್‌ಭಂಜ್ ಮತ್ತು ಬಾಲೇಶ್ವರದಲ್ಲಿ ರ್‍ಯಾಲಿ ನಡೆಸಿದ ಪ್ರಧಾನಿ, ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ದಿಢೀರ್ ಅನಾರೋಗ್ಯಕ್ಕೆ ಕಾರಣ ಏನು ಎನ್ನುವುದನ್ನು ತಿಳಿಯಲು ಒಂದು ಸಮಿತಿ ರಚಿಸುವುದಾಗಿ ತಿಳಿಸಿದರು.
'ಹದಗೆಡುತ್ತಿರುವ ಅವರ ಆರೋಗ್ಯದ ಬಗ್ಗೆ ನವೀನ್ ಬಾಬು ಅವರ ಹಿತೈಷಿಗಳು ಚಿಂತೆಗೊಳಗಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅವರ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ. ಅದರ ಹಿಂದೆ ಕುತಂತ್ರ ಇದೆಯೇ? ನವೀನ್ ಅವರ ಪರವಾಗಿ ಸರ್ಕಾರ ನಡೆಸುತ್ತಿರುವ ಲಾಬಿಯು ಅದಕ್ಕೆ ಕಾರಣವೇ' ಎಂದು ಪ್ರಶ್ನಿಸಿದರು.
ಬಿಜೆಡಿ ಮುಖಂಡ ವಿ.ಕೆ.ಪಾಂಡಿಯನ್ ಅವರ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, 'ಒಡಿಯಾ ಮೂಲದವರೇ ಮುಖ್ಯಮಂತ್ರಿ ಆಗಬೇಕೆಂದು ಇಡೀ ಒಡಿಶಾ ಬಯಸುತ್ತಿದೆ. ರಾಜ್ಯದ ಜನ 25 ವರ್ಷದ ಬಿಜೆಡಿ ಆಡಳಿತಕ್ಕೆ ಪೂರ್ಣ ವಿರಾಮ ಇಡಲು ತೀರ್ಮಾನಿಸಿದ್ದಾರೆ' ಎಂದು ಹೇಳಿದರು.
'ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಭಯೋತ್ಪಾದನೆಯನ್ನು ತಡೆಯಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟಗಳನ್ನು ತಡೆಯುವ ಮೂಲಕ ಅದನ್ನು ನಾವು ಸಾಧ್ಯವಾಗಿಸಿದೆವು. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪಿಸಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ, ಈಗ ಅಲ್ಲಿನ ಜನ ಗಣರಾಜ್ಯೋತ್ಸವ ಆಚರಿಸುತ್ತಿದ್ದಾರೆ ಮತ್ತು ದೊಡ್ಡ ಸಂಖ್ಯೆಯಲ್ಲಿ ಬಂದು ಮತದಾನ ಮಾಡುತ್ತಿದ್ದಾರೆ' ಎಂದರು.
ನನ್ನ ಆರೋಗ್ಯ ಉತ್ತಮವಾಗಿದೆ: ನವೀನ್ ಪಟ್ನಾಯಕ್
ನನ್ನ ಆರೋಗ್ಯ ಉತ್ತಮವಾಗಿದ್ದು ಕಳೆದ ಒಂದು ತಿಂಗಳಿಂದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದೇನೆ' ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬುಧವಾರ ಹೇಳಿದರು. ತಮ್ಮ ಆರೋಗ್ಯದ ಬಗ್ಗೆ ಪ್ರಧಾನಿ ಮೋದಿ ಆಡಿದ ಮಾತಿಗೆ ಪ್ರತಿಕ್ರಿಯಿಸಿದ ಅವರು 'ನಾನು ಅವರ (ಪ್ರಧಾನಿ) ಒಳ್ಳೆಯ ಸ್ನೇಹಿತ ಎಂದು ಅವರು ಈ ಹಿಂದೆ ಹೇಳಿದ್ದರು. ಅವರು ನನಗೆ ಕರೆ ಮಾಡಬೇಕಿತ್ತು. ಆದರೆ ಒಡಿಶಾ ಹಾಗೂ ದೆಹಲಿಯ ಅನೇಕ ಬಿಜೆಪಿ ಮುಖಂಡರು ನನ್ನ ಆರೋಗ್ಯದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಎಂದು ಪ್ರಧಾನಿಗೆ ಖಚಿತಪಡಿಸುತ್ತಿದ್ದೇನೆ' ಎಂದು ತಿಳಿಸಿದರು.