ಹೈದರಾಬಾದ್ : ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದ ಅಂತಿಮ ವರದಿಯನ್ನು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
'ರೋಹಿತ್ ವೇಮುಲ ಅವರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಮತ್ತು ತನ್ನ ನಿಜವಾದ ಗುರುತು ಎಲ್ಲಿ ಬಯಲಾಗುತ್ತದೆಯೋ ಎಂಬ ಆತಂಕದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಅಂತಿಮ ವರದಿಯಲ್ಲಿ ಹೇಳಲಾಗಿದೆ.
'ವೇಮುಲ ಅವರು 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರಿಗೆ ಹಲವು ಸಮಸ್ಯೆಗಳಿದ್ದವು, ಅವು ಆತ್ಮಹತ್ಯೆಗೆ ಪ್ರೇರೇಪಿಸಿವೆ. ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಲಿಲ್ಲ. ಅದು ಅವರಿಗೂ ತಿಳಿದಿತ್ತು. ಅವರಿಗೆ ಎಸ್.ಸಿ ಪ್ರಮಾಣಪತ್ರವನ್ನು ಅವರ ತಾಯಿಯೇ ಕೊಡಿಸಿದ್ದರು. ಇದು ಬಹಿರಂಗವಾದರೆ ಹಲವು ಸಂಕಷ್ಟಗಳು ಎದುರಾಗುತ್ತವೆ ಎಂದು ಅವರು ನಿರಂತರ ಭಯದಲ್ಲಿದ್ದರು. ತಾನು ಗಳಿಸಿದ ಶೈಕ್ಷಣಿಕ ಪದವಿಗಳು ವ್ಯರ್ಥವಾಗುತ್ತವೆ ಮತ್ತು ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ ಎಂದು ಅವರು ಚಿಂತಿತರಾಗಿದ್ದರು' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹೈದರಾಬಾದ್ ವಿಶ್ವವಿದ್ಯಾಲಯದ ಆಗಿನ ಕುಲಪತಿ ಅಪ್ಪಾ ರಾವ್ ಪೊಡಿಲೆ ಮತ್ತು ಪ್ರಸ್ತುತ ಹರಿಯಾಣ ರಾಜ್ಯಪಾಲರಾಗಿರುವ ಬಂಡಾರು ದತ್ತಾತ್ರೇಯ ಅವರು ಈ ಪ್ರಕರಣದ ಆರೋಪಿಗಳಾಗಿದ್ದರು.
ವೇಮುಲ ಅವರ ಸಾವು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗಿನ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಇದನ್ನು ಜಾತಿ ಕಲಹ ಎಂದು ಬಿಂಬಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.