ನವದೆಹಲಿ: ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಅಡಿಯಲ್ಲಿ ವಕೀಲರ ವಿರುದ್ಧ ದಾಖಲಿಸುವ ದೂರುಗಳನ್ನು ಪುರಸ್ಕರಿಸಲು ಆಗದು, ವೃತ್ತಿಪರರು ಒದಗಿಸುವ ಸೇವೆಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ವೃತ್ತಿಪರರಾಗಿ ವಕೀಲರು ಹೊಂದಿರುವ ಹೊಣೆ, ಅವರ ಸ್ಥಾನ ಮತ್ತು ಅವರು ನಿರ್ವಹಿಸುವ ಕರ್ತವ್ಯಗಳನ್ನು ಪರಿಗಣಿಸಿ, ವಕೀಲ ವೃತ್ತಿಯು ವಿಶಿಷ್ಟವಾದುದು ಎನ್ನಬೇಕಾಗುತ್ತದೆ; ಅದನ್ನು ಬೇರೆ ಯಾವುದೇ ವೃತ್ತಿಯ ಜೊತೆ ಹೋಲಿಸಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.
ವೃತ್ತಿಯೊಂದನ್ನು ವಾಣಿಜ್ಯ ವಹಿವಾಟು ಅಥವಾ ವ್ಯಾಪಾರ ವಹಿವಾಟಿನೊಂದಿಗೆ ಹೋಲಿಸಿ ನೋಡಲು ಆಗುವುದಿಲ್ಲ. ವೃತ್ತಿಪರರು ಒದಗಿಸುವ ಸೇವೆಗಳನ್ನು ಉದ್ಯಮಿಗಳು ಅಥವಾ ವರ್ತಕರು ಒದಗಿಸುವ ಸೇವೆಗಳ ಜೊತೆ ಹೋಲಿಸಲು ಆಗುವುದಿಲ್ಲ ಎಂದು ಪೀಠವು ಹೇಳಿದೆ.
' ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಉದ್ದೇಶವು ನ್ಯಾಯಸಮ್ಮತವಲ್ಲದ ವ್ಯಾಪಾರ ವಹಿವಾಟುಗಳಿಂದ ಹಾಗೂ ಅನೈತಿಕವಾದ ವಾಣಿಜ್ಯ ವಹಿವಾಟುಗಳಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುವುದಾಗಿದೆ. ವೃತ್ತಿಪರರನ್ನು ಅಥವಾ ಅವರು ಒದಗಿಸುವ ಸೇವೆಗಳನ್ನು ಈ ಕಾಯ್ದೆಯ ಅಡಿಯಲ್ಲಿ ತರುವ ಉದ್ದೇಶವು ಶಾಸನಸಭೆಗೆ ಯಾವತ್ತೂ ಇರಲಿಲ್ಲ' ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಪ್ರತ್ಯೇಕವಾದ ತೀರ್ಪು ಬರೆದಿರುವ ನ್ಯಾಯಮೂರ್ತಿ ಮಿತ್ತಲ್ ಅವರು, ವೃತ್ತಿಪರರು ಒದಗಿಸುವ ಸೇವೆಗಳನ್ನು, ಅದರಲ್ಲೂ ಮುಖ್ಯವಾಗಿ ವಕೀಲರು ಒದಗಿಸುವ ಸೇವೆಗಳನ್ನು ಗ್ರಾಹಕರ ಹಿತರಕ್ಷಣಾ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಬೇಕು ಎಂದು ಹೇಳಿದ್ದಾರೆ. ಈ ಕಾಯ್ದೆಯನ್ನು ರೂಪಿಸುವಲ್ಲಿ ಇದ್ದ ಉದ್ದೇಶದ ಕಾರಣಕ್ಕೆ ಹೀಗೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
'ಬೇರೆ ಕೆಲವು ದೇಶಗಳಲ್ಲಿ ಇರುವ ರೀತಿಯಲ್ಲಿಯೇ ಈ ಕಾಯ್ದೆಯು ಭಾರತದಲ್ಲಿ ವೃತ್ತಿಪರರು ನೀಡುವ, ಅದರಲ್ಲೂ ಮುಖ್ಯವಾಗಿ ವಕೀಲರು ತಮ್ಮ ಕಕ್ಷಿದಾರರಿಗೆ ಒದಗಿಸುವ ಸೇವೆಗಳನ್ನು ಒಳಗೊಳ್ಳುವ ಉದ್ದೇಶವನ್ನು ಹೊಂದಿಲ್ಲ' ಎಂದು ಅವರು ವಿವರಿಸಿದ್ದಾರೆ.
'ಪುನರ್ ಪರಿಶೀಲನೆ ಬೇಕು'
ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡವರು ಒದಗಿಸುವ ಸೇವೆಗಳನ್ನು ಗ್ರಾಹಕರ ಹಿತರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ತಂದ 1995ರಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ವಿ.ಪಿ. ಶಾಂತಾ ನಡುವಿನ ಪ್ರಕರಣದಲ್ಲಿ ತ್ರಿಸದಸ್ಯ ಪೀಠವೊಂದು ನೀಡಿದ ತೀರ್ಪನ್ನು ವಿಸ್ತೃತ ಪೀಠವೊಂದು ಪುನರ್‌ಪರಿಶೀಲನೆಗೆ ಒಳಪಡಿಸಬೇಕು ಎಂದು ವಿಭಾಗೀಯ ಪೀಠವು ಅಭಿಪ್ರಾಯ ವ್ಯಕ್ತಪಡಿಸಿದೆ.