ಕಾಸರಗೋಡು: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಿವಿಧ ಬೇಡಿಕೆ ಮುಂದಿರಿಸಿ ಕಾಸರಗೋಡು ಉಪ ಖಜಾನೆ ಎದುರು ಧರಣಿ ನಡೆಸಿತು. ಮೂರನೇ ಕಂತಿನ ವೇತನ ಪರಿಷ್ಕರಣೆ ಬಾಕಿಯಿಂದ ವಶಪಡಿಸಿಕೊಂಡಿರುವ ಕ್ಷಾಮ ಭತ್ಯೆ ತಕ್ಷಣ ಬಿಡುಗಡೆಗೊಳಿಸಬೇಕು, ತಡೆಹಿಡಿಯಲಾದ ಇತರ ಸವಲತ್ತುಗಳನ್ನು ಈ ಕೂಡಲೇ ಮಂಜೂರುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ಆಯೋಜಿಸಲಾಗಿತ್ತು. ಧರಣಿಯನ್ನು ಸಂಘಟನೆ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವಕೀಲ ಜಿ. ಜಯಭಾನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ಮುತ್ತುಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಮುಖಂಡರಾದ ಎ.ವಿ.ನಾರಾಯಣನ್ ಮಾಸ್ಟರ್, ರಾಜ್ಯ ಉಪಾಧ್ಯಕ್ಷ ಎಂ.ಈಶ್ವರ ರಾವ್, ದಿಲೀಪ್ ಕುಮಾರ್, ಸವಿತಾ ಟೀಚರ್, ಕೆ.ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಬಿ. ನಾಗರಾಜ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಎಂ.ಬಾಬು ನೀಲೇಶ್ವರ ವಂದಿಸಿದರು.