ಇಸ್ಲಾಮಾಬಾದ್ (PTI): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಐವರು ಚೀನಾ ಎಂಜಿನಿಯರ್‌ಗಳ ಸಾವಿಗೆ ಕಾರಣವಾದ ಆತ್ಮಾಹುತಿ ಬಾಂಬ್ ದಾಳಿಯು ಅಫ್ಗಾನಿಸ್ತಾನದಲ್ಲಿ ಯೋಜಿಸಲಾಗಿತ್ತು ಎಂದು ಪಾಕಿಸ್ತಾನ ಸೇನೆ ಮಂಗಳವಾರ ಆರೋಪಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಸ್‌ಪಿಆರ್ ಮುಖ್ಯಸ್ಥ ಮೇಜರ್ ಜನರಲ್ ಅಹ್ಮದ್ ಷರೀಫ್, 'ಪಾಕಿಸ್ತಾನದಲ್ಲಿ ದಾಳಿಗಳನ್ನು ನಡೆಸಲು ಉಗ್ರರಿಗೆ ತನ್ನ ನೆಲವನ್ನು ಬಳಸಿಕೊಳ್ಳಲು ಅಫ್ಗಾನಿಸ್ತಾನ ಅವಕಾಶ ಮಾಡಿಕೊಟ್ಟಿದೆ. ಈ ಆತ್ಮಾಹುತಿ ಬಾಂಬ್ ದಾಳಿಯನ್ನು ಅಫ್ಗಾನಿಸ್ತಾನದ ಪ್ರಜೆ ಎಸಗಿದ್ದ' ಎಂದು ದೂರಿದರು.
ಈ ಆತ್ಮಾಹುತಿ ದಾಳಿಯು ಅಫ್ಗಾನಿಸ್ತಾನದ ಗಡಿಯನ್ನು ಸಂಪರ್ಕಿಸುತ್ತದೆ. ಈ ಯೋಜನೆಯನ್ನು ಅಫ್ಗಾನಿಸ್ತಾನದಲ್ಲೇ ರೂಪಿಸಲಾಗಿತ್ತು. ಭಯೋತ್ಪಾದಕರು ಮತ್ತು ಭಯೋತ್ಪಾದಕ ಕೃತ್ಯಗಳಿಗೆ ವ್ಯವಸ್ಥೆ ಕಲ್ಪಿಸುವವರನ್ನು ಅಫ್ಗಾನಿಸ್ತಾನ ನಿಯಂತ್ರಿಸುತ್ತದೆ ಎಂದು ಷರೀಫ್ ಆರೋಪಿಸಿದ್ದಾರೆ.