ರಾಂಚಿ: ಜಾರ್ಖಂಡ್‌ನ ಸಚಿವ ಆಲಂಗೀರ್ ಆಲಂ ಅವರ ಕಾರ್ಯದರ್ಶಿಯ ಮನೆಗೆಲಸದವರಿಗೆ ಸೇರಿದ್ದು ಎನ್ನಲಾದ ಸ್ಥಳದಲ್ಲಿ ನಡೆಸಿದ ಶೋಧದ ಸಂದರ್ಭದಲ್ಲಿ ಸೂಕ್ತ ಲೆಕ್ಕ ಇಲ್ಲದ ₹20 ಕೋಟಿಯಿಂದ ₹30 ಕೋಟಿಯಷ್ಟು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.
ಆರು ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ. ಶೋಧ ನಡೆಯುತ್ತಿರುವ ಇನ್ನೊಂದು ಸ್ಥಳದಿಂದ ₹2.9 ಕೋಟಿ, ಮತ್ತೊಂದು ಸ್ಥಳದಿಂದ ₹10 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಕೇಂದ್ರೀಯ ತನಿಖಾ ಸಂಸ್ಥೆಯಾದ ಇ.ಡಿ.ಯ ಅಧಿಕಾರಿಗಳು ಗಡಿಖಾನಾ ಚೌಕ್‌ನಲ್ಲಿ ಇರುವ ಕಟ್ಟಡವೊಂದರ ಕೊಠಡಿಯಿಂದ ದೊಡ್ಡ ಚೀಲಗಳಲ್ಲಿ ನೋಟುಗಳ ಕಂತೆಗಳನ್ನು ಒಯ್ಯುತ್ತಿರುವ ದೃಶ್ಯಗಳು ವಿಡಿಯೊಗಳಲ್ಲಿ ಸೆರೆಯಾಗಿವೆ. ಭದ್ರತಾ ಸಿಬ್ಬಂದಿ ಕೂಡ ಈ ದೃಶ್ಯಗಳಲ್ಲಿ ಇದ್ದಾರೆ.
ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಸಚಿವ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆಗೆಲಸದ ವ್ಯಕ್ತಿಯೊಬ್ಬರು ಈ ಸ್ಥಳದಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ. 'ಈ ಕುರಿತು ಇದುವರೆಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ' ಎಂದು ಆಲಂ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
'ನಾನು ಟಿ.ವಿ. ವೀಕ್ಷಿಸುತ್ತಿದ್ದೇನೆ. ಈ ಸ್ಥಳಕ್ಕೂ ನನಗೆ ಸರ್ಕಾರದ ಕಡೆಯಿಂದ ನೀಡಲಾಗಿರುವ ಆಪ್ತ ಕಾರ್ಯದರ್ಶಿಗೂ ನಂಟು ಇದೆ ಎಂದು ಟಿ.ವಿ. ವರದಿ ಹೇಳುತ್ತಿದೆ' ಎಂದು ಆಲಂ ಹೇಳಿದ್ದಾರೆ. ಅಲ್ಲಿ ಸಿಕ್ಕ ಹಣವನ್ನು ಲೆಕ್ಕ ಹಾಕಲು ಎಂಟು ನೋಟು ಎಣಿಕೆ ಯಂತ್ರಗಳನ್ನು ಬಳಸಿಕೊಳ್ಳಲಾಗಿದೆ. ದೊರೆತಿರುವ ಹಣದ ಮೊತ್ತವು ₹20 ಕೋಟಿಯಿಂದ ₹30 ಕೋಟಿಯವರೆಗೆ ಇರಬಹುದು ಎಂದು ಇ.ಡಿ. ಮೂಲಗಳು ಮಾಹಿತಿ ನೀಡಿವೆ. ಮುಟ್ಟುಗೋಲು ಹಾಕಿಕೊಂಡ ಹಣವನ್ನು ತುಂಬಿಸಿಕೊಂಡು ತರಲು ದೊಡ್ಡ ಟ್ರಂಕ್‌ಗಳನ್ನು ಒಳಗೆ ಒಯ್ಯುತ್ತಿರುವ ದೃಶ್ಯಗಳೂ ವಿಡಿಯೊದಲ್ಲಿ ಇವೆ.
ಇಲ್ಲಿ ಸಿಕ್ಕ ನೋಟುಗಳಲ್ಲಿ ಹೆಚ್ಚಿನವು ₹500ರ ಮುಖಬೆಲೆಯವು. ಅಲ್ಲದೆ, ಒಂದಿಷ್ಟು ಚಿನ್ನಾಭರಣಗಳನ್ನು ಕೂಡ ಇಲ್ಲಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಆಲಂ ಅವರು ಕಾಂಗ್ರೆಸ್ ಮುಖಂಡ ಕೂಡ ಹೌದು.
ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಮುಖ್ಯ ಎಂಜಿನಿಯರ್ ವೀರೇಂದ್ರ ಕುಮಾರ್ ರಾಮ್ ಅವರ ವಿರುದ್ಧ ದಾಖಲಾಗಿರುವ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರವಾಗಿ ಈ ಶೋಧ ನಡೆದಿದೆ. ರಾಮ್ ಅವರನ್ನು ಇ.ಡಿ. ಕಳೆದ ವರ್ಷ ಬಂಧಿಸಿದೆ.
'ರಾಮ್ ಅವರು ಗುತ್ತಿಗೆದಾರರಿಗೆ ಟೆಂಡರ್ ನೀಡಲು ಕಮಿಷನ್ ಪಡೆಯುತ್ತಿದ್ದರು' ಎಂದು ಇ.ಡಿ. ಕಳೆದ ವರ್ಷದ ಏಪ್ರಿಲ್‌ನಲ್ಲಿ ನೀಡಿದ್ದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ರಾಮ್ ಅವರಿಗೆ ಸೇರಿದ ₹39 ಕೋಟಿಯನ್ನು ಇ.ಡಿ. ಅಧಿಕಾರಿಗಳು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ರಾಮ್ ಅವರು ಅಕ್ರಮವಾಗಿ ಪಡೆದ ಹಣವನ್ನು ತಮ್ಮ ಕುಟುಂಬದ ಜೊತೆ ಐಷಾರಾಮಿ ಜೀವನ ಕಳೆಯಲು ಬಳಸುತ್ತಿದ್ದರು ಎಂದು ಕೂಡ ಇ.ಡಿ. ಹೇಳಿತ್ತು.