HEALTH TIPS

ಆರನೇ ಹಂತದ ಮತದಾನ: ಪಶ್ಚಿಮ ಬಂಗಾಳದ ಅಲ್ಲಲ್ಲಿ ಹಿಂಸಾಚಾರ

         ಕೋಲ್ಕತ್ತ : ಪಶ್ಚಿಮ ಬಂಗಾಳದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ ನಡೆದ ಮತದಾನದ ವೇಳೆ ಜಾರ್‌ಗ್ರಾಮ್‌, ತಮ್ಲುಕ್‌, ಕಾಂಠಿ, ಮಿಡ್ನಾಪುರ, ಬಿಷ್ಣುಪುರ ಕ್ಷೇತ್ರಗಳ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆದಿರುವ ಘಟನೆಗಳು ವರದಿಯಾಗಿವೆ.

          ಚುನಾವಣಾ ಆಯೋಗಕ್ಕೆ ವಿವಿಧ ರಾಜಕೀಯ ಪಕ್ಷಗಳಿಂದ ಬೆಳಿಗ್ಗೆ 11 ಗಂಟೆ ವೇಳೆಗೆ 954 ದೂರುಗಳು ಬಂದಿದ್ದವು.

            ಈ ಪೈಕಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಲೋಪ, ಏಜೆಂಟರನ್ನು ಬೂತ್‌ ಪ್ರವೇಶಿಸಲು ಬಿಡುತ್ತಿಲ್ಲ ಎಂಬ ದೂರುಗಳು ಪ್ರಮುಖವಾಗಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲು ಎಸೆತ:

          ಜಾರ್‌ಗ್ರಾಮ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಮತ್ತು ಅವರ ಬೆಂಗಾವಲು ಪಡೆಯ ಮೇಲೆ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಗಾರ್ಬೆಟಾ ಪ್ರದೇಶದಲ್ಲಿ ಜನರ ಗುಂಪು ದಾಳಿ ನಡೆಸಿದೆ. ಈ ವೇಳೆ ಭದ್ರತಾ ಸಿಬ್ಬಂದಿಯ ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

'ಕೆಲ ಮತಗಟ್ಟೆಗಳಲ್ಲಿ ಬಿಜೆಪಿ ಏಜೆಂಟರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂಬ ದೂರು ಬಂದ ಕಾರಣ ಗಾರ್ಬೆಟಾಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ' ಎಂದು ತುಡು ಪ್ರತಿಕ್ರಿಯಿಸಿದ್ದಾರೆ.

'ಟಿಎಂಸಿ ಗೂಂಡಾಗಳು ಇದ್ದಕ್ಕಿದ್ದಂತೆ ರಸ್ತೆಗೆ ಅಡ್ಡ ಬಂದು, ಕಾರಿನ ಮೇಲೆ ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದರು. ನನ್ನ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದಾಗ ಅವರು ಗಾಯಗೊಂಡರು. ನನ್ನ ಜೊತೆಗಿದ್ದ ಇಬ್ಬರು ಸಿಐಎಸ್‌ಎಫ್‌ ಜವಾನರ ತಲೆಗೂ ಗಾಯಗಳಾಗಿವೆ' ಎಂದು ಅವರು ಹೇಳಿದ್ದಾರೆ.

              ತುಡು ಮತ್ತು ಅವರ ಬೆಂಗಾವಲು ಸಿಬ್ಬಂದಿಯನ್ನು ಜನರ ಗುಂಪು ಅಟ್ಟಿಸಿಕೊಂಡು ಹೋಗುತ್ತಿರುವ ಮತ್ತು ಕಲ್ಲು, ಇಟ್ಟಿಗೆಗಳನ್ನು ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ. ಈ ಘಟನೆ ವೇಳೆ ಮಾಧ್ಯಮ ಸಂಸ್ಥೆಗಳ ಕೆಲ ವಾಹನಗಳೂ ಧ್ವಂಸವಾಗಿವೆ ಎಂದು ವರದಿಯಾಗಿದೆ.

ಈ ಆರೋಪಗಳನ್ನು ತಳ್ಳಿಹಾಕಿರುವ ಟಿಎಂಸಿ ಸ್ಥಳೀಯ ನಾಯಕರು, 'ಬಿಜೆಪಿ ಅಭ್ಯರ್ಥಿ ಮತದಾರರಿಗೆ ಬೆದರಿಕೆ ಹಾಕುತ್ತಿದ್ದರು. ಈ ವೇಳೆ ಆಕ್ರೋಶಗೊಂಡ ಗ್ರಾಮದ ಜನರು ಪ್ರತಿಭಟಿಸಿದ್ದಾರೆ' ಎಂದು ಹೇಳಿದ್ದಾರೆ.

ಘಟಾಲ್‌, ಕಾಂಠಿಯಲ್ಲೂ ಘರ್ಷಣೆ:

            ಮತಗಟ್ಟೆ ಏಜೆಂಟರನ್ನು ಬೂತ್‌ ಒಳಗೆ ಬಿಡಲಾಗುತ್ತಿಲ್ಲ ಎಂದು ಘಟಾಲ್‌ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. 'ನಮ್ಮ ಏಜೆಂಟರಿಗೆ ಬೂತ್‌ ಪ್ರವೇಶಕ್ಕೆ ಅಡ್ಡಿ ಮಾಡುತ್ತಿರುವ ಟಿಎಂಸಿ ಗೂಂಡಾಗಳು ಮತದಾನ ಪ್ರಕ್ರಿಯೆಗೆ ಧಕ್ಕೆ ತುರತ್ತಿದ್ದಾರೆ' ಎಂದು ಬಿಜೆಪಿ ಅಭ್ಯರ್ಥಿ ಹಿರಣ್‌ ಚಟರ್ಜಿ ದೂರಿದ್ದಾರೆ.

           ಇದರ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. ಈ ಕ್ಷೇತ್ರದ ಹಾಲಿ ಸಂಸದ, ಟಿಎಂಸಿಯ ದೇವ್‌ ಅವರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

             ಕಾಂಠಿ ಕ್ಷೇತ್ರದ ವಿವಿಧೆಡೆಯೂ ಹಿಂಸಾಚಾರದ ವರದಿಯಾಗಿದೆ. ಟಿಎಂಸಿ ಮತ್ತು ಕೇಂದ್ರ ಪಡೆಗಳ ವಿರುದ್ಧ ಬಿಜೆಪಿ ಹರಿಹಾಯ್ದು ಪ್ರತಿಭಟನೆ ನಡೆಸಿದೆ. 'ಟಿಎಂಸಿ ಮತ್ತು ಕೇಂದ್ರ ಪಡೆಗಳು ನಮ್ಮ ಪಕ್ಷದ ಬೆಂಬಲಿಗರನ್ನು ಥಳಿಸುತ್ತಿವೆ' ಎಂದು ಬಿಜೆಪಿ ಅಭ್ಯರ್ಥಿ ಸೌಮೇಂದು ಅಧಿಕಾರಿ ಆರೋಪಿಸಿದ್ದಾರೆ.

'ಗೋ ಬ್ಯಾಕ್‌' ಘೋಷಣೆ:

           ಮಿಡ್ನಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪಾಲ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಟಿಎಂಸಿ ಕಾರ್ಯಕರ್ತರು 'ಗೋ ಬ್ಯಾಕ್‌' ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೇಂದ್ರ ಪಡೆಗಳು ಗುಂಪುಗಳನ್ನು ಚದುರಿಸಿವೆ.

              ಬಿಜೆಪಿ ಅಭ್ಯರ್ಥಿಯಾಗಿರುವ ಕಲ್ಕತ್ತ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಅವರು ತಮ್ಲುಕ್‌ ಮತಗಟ್ಟೆಗೆ ಬಂದಾಗ, ಜನರ ಗುಂಪು ಅವರ ವಿರುದ್ಧ ಘೋಷಣೆಗಳನ್ನು ಕೂಗಿದೆ. ಕೇಂದ್ರ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಿಸಿವೆ.

ಬಂಕುರಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಸುಭಾಶ್‌ ಸರ್ಕಾರ್ ಅವರು ಬೂತ್‌ ಒಂದಕ್ಕೆ ಭೇಟಿ ನೀಡಿದಾಗ ಪ್ರತಿಭಟನೆಯನ್ನು ಎದುರಿಸಿದ್ದಾರೆ.

             ಪುರ್ಬಾ ಮೇದಿನಿಪುರ ಜಿಲ್ಲೆಯ ಮಹಿಷಾದಲ್‌ನಲ್ಲಿ ಟಿಎಂಸಿ ಕಾರ್ಯಕರ್ತನನ್ನು ಅಪರಿಚಿತರು ಶುಕ್ರವಾರ ರಾತ್ರಿ ಕೊಂದಿದ್ದಾರೆ. ಮೃತನನ್ನು ಶೇಖ್‌ ಮೊಯಿಬುಲ್‌ ಎಂದು ಗುರುತಿಸಲಾಗಿದ್ದು, ಸ್ಥಳೀಯ ಪಂಚಾಯ್ತಿ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries