ಮಂಜೇಶ್ವರ: ಜನರನ್ನು ಹೈರಾಣಗೊಳಿಸಿದ್ದ ಬಿಸಿಲಿನ ತಾಪಮಾನದ ಮಧ್ಯೆ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಕಾಸರಗೋಡು ಸಹಿತ ಕರಾವಳಿಯಾದ್ಯಂತ ಮಳೆಯಾಗುತ್ತಿದೆ. ಸಿಡಿಲು-ಗುಡುಗಿನ ಆರ್ಭಟಗಳೊಂದಿಗೆ ಸುರಿಯುವ ಮಳೆಯ ಕಾರಣ ಹಲವೆಡೆ ಹಾನಿಗಳು ಸಂಭವಿಸಿವೆ.
ಈ ಮಧ್ಯೆ ಮೀಯಪದವು ಸಮೀಪದ ಮೊಗೇರ ದೈವಸ್ಥಾನದ ಸಮೀಪ ಶುಕ್ರವಾರ ರಾತ್ರಿ ಭಾರೀ ಪ್ರಮಾಣದ ಸಿಡಿಲು ಅಪ್ಪಳಿಸಿದ್ದು ಮರವೊಂದು ಸೀಳಿಕೊಂಡಿದೆ. ಯಾವುದೇ ಜೀವ ಹಾನಿಗಳು ಸಂಭವಿಸದಿದ್ದರೂ ಆತಂಕ ಮನೆಮಾಡಿದೆ.
ಸಿಡಿಲಿನ ಆಘಾತ-ಕೃಷಿಕ ಮೃತ್ಯು:
ಸಿಡಿಲಿನ ಆಘಾತದಿಂದ ಬೆಳ್ಳೂರು ಪಂಚಾಯಿತಿಯ ನೆಟ್ಟಣಿಗೆ ಸಬ್ರಕಜೆ ದೇವರಗುತ್ತು ನಿವಾಸಿ, ಕೃಷಿಕ ಗಂಗಾಧರ ರೈ(78)ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಆಹಾರ ಸಏವಿಸಿ ಮನೆ ವರಾಂಡದಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಸಂದರ್ಭ ಭಾರೀ ಸಿಡಿಲಿನ ಆಘಾತವಾಗಿದ್ದು, ಇವರು ಕುಚಿಯಿಂದ ಕೆಳಕ್ಕುರುಳಿದ್ದರು. ತಕ್ಷಣ ಇವರನ್ನು ಮುಳ್ಳೇರಿಯಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಸಿಡಿಲಿನ ಆಘಾತದಿಂದ ಮನೆ ವಿದ್ಯುತ್ ವಯರಿಂಗ್, ಬಲ್ಬು ಹಾಘೂ ಇತರ ಉಪಕರಣಗಳಿಗೂ ಹಾಣಿಯುಂಟಾಗಿದೆ.