ಶ್ರೀನಗರ (PTI): ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತಯಬಾ ಉಗ್ರ ಸಂಘಟನೆಯ ಘಟಕವಾದ 'ಟಿಆರ್‌ಎಫ್'ನ ಕಮಾಂಡರ್ ಸೇರಿದಂತೆ ಇಬ್ಬರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಕಮಾಂಡರ್‌ನನ್ನು ಪೊಲೀಸರಿಗೆ ಬೇಕಾಗಿದ್ದ ಬಸಿತ್ ದಾರ್ ಎಂಬುದಾಗಿ ಗುರುತಿಸಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ವಿಧಿ ಕುಮಾರ್ ಬಿರ್ಧಿ ತಿಳಿಸಿದ್ದಾರೆ.
ಉಗ್ರರು ಅಡಗಿ ಕುಳಿತ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸೋಮವಾರ ರಾತ್ರಿ ರೆಡವಾನಿ ಗ್ರಾಮವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿದವು. ಈ ವೇಳೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಹತ್ಯೆಯಾಗಿದ್ದಾರೆ ಎಂದು ಹೇಳಿದರು.
'ಶರಣಾಗತಿಯಾಗಲು ಅವಕಾಶ ನೀಡಲಾಗಿತ್ತು. ಆದರೆ, ಅವರು ದಾಳಿ ಮುಂದುವರಿಸಿದ ಕಾರಣ ಹತ್ಯೆಗೈಯುವುದು ಅನಿವಾರ್ಯವಾಯಿತು' ಎಂದು ಹೇಳಿದರು.
'ಸ್ಥಳದಿಂದ ಉಗ್ರರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಶೋಧ ಮಂಗಳವಾರ ಮಧ್ಯಾಹ್ನದವರೆಗೂ ನಡೆಯಿತು' ಎಂದು ತಿಳಿಸಿದ್ದಾರೆ.
ಪೊಲೀಸರು ಮತ್ತು ನಾಗರಿಕರ ಹತ್ಯೆ ಸೇರಿದಂತೆ 18 ಪ್ರಕರಣಗಳಲ್ಲಿ ದಾರ್ ಭಾಗಿಯಾಗಿದ್ದ ಎಂದರು.
2022ರಲ್ಲಿ ರಾಷ್ಟ್ರೀಯ ತನಿಖಾ ದಳವು ಈತನ ಸುಳಿವು ನೀಡಿದವರಿಗೆ ₹10 ಲಕ್ಷ ನೀಡುವುದಾಗಿ ಘೋಷಿಸಿತ್ತು.