HEALTH TIPS

ಕಾಂಗ್ರೆಸ್ ಜತೆ ಸಾಯುವುದಕ್ಕಿಂತ ಮೈತ್ರಿ ಬದಲಿಸಿ: ಪ್ರಧಾನಿ ನರೇಂದ್ರ ಮೋದಿ

              ನಂದೂರ್‌ಬಾರ್‌: ಕಾಂಗ್ರೆಸ್ ಜತೆ ಸಾಯುವುದಕ್ಕಿಂತ ಲೋಕಸಭಾ ಚುನಾವಣೆಯ ನಂತರ ಏಕನಾಥ್ ಶಿಂದೆ ಮತ್ತು ಅಜಿತ್ ಪವಾರ್ ಅವರೊಂದಿಗೆ ಸೇರಿಕೊಳ್ಳಿ ಎಂದು ಎನ್‌ಸಿಪಿ (ಶರದ್‌ ಪವಾರ್ ಬಣ) ಮತ್ತು ಶಿವಸೇನಾಗೆ (ಯುಬಿಟಿ) ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಲಹೆ ನೀಡಿದ್ದಾರೆ.

            'ಮುಂದಿನ ಕೆಲ ವರ್ಷಗಳಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ಹೆಚ್ಚು ಗುರುತಿಸಿಕೊಳ್ಳಲಿವೆ ಅಥವಾ ತಮಗೆ ಉತ್ತಮ ಎನಿಸಿದರೆ ಅವು ಕಾಂಗ್ರೆಸ್‌ನೊಂದಿಗೆ ವಿಲೀನವಾಗುವ ಆಯ್ಕೆಯನ್ನೂ ಪರಿಗಣಿಸಬಹುದು' ಎಂದು ಶರದ್ ಪವಾರ್ ಇತ್ತೀಚೆಗೆ ಹೇಳಿದ್ದರು.

                 ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, '40-50 ವರ್ಷಗಳಿಂದ ಸಕ್ರಿಯರಾಗಿರುವ ಹಿರಿಯ ನಾಯಕರೊಬ್ಬರು ಬಾರಾಮತಿ ಕ್ಷೇತ್ರದಲ್ಲಿ ಮತದಾನದ ಬಳಿಕ ಚಿಂತೆಗೊಳಗಾಗಿದ್ದು, ಜೂನ್ ನಾಲ್ಕರ ನಂತರ ಸಣ್ಣ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಜತೆ ವಿಲೀನಗೊಳ್ಳಲಿವೆ ಎಂದಿದ್ದಾರೆ. ಅದರ ಅರ್ಥ ನಕಲಿ ಎನ್‌ಸಿಪಿ ಮತ್ತು ಶಿವಸೇನಾ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿವೆ' ಎಂದು ಹೇಳಿದರು.

                  ಅವರು ಸರ್ಕಾರಿ ಇಫ್ತಾರ್ ಆಯೋಜಿಸುತ್ತಾರೆ ಮತ್ತು ಭಯೋತ್ಪಾದಕರ ಸಮಾಧಿಗಳನ್ನು ಅಲಂಕರಿಸುತ್ತಾರೆ ಎಂದು ಪ್ರಧಾನಿ ಟೀಕಿಸಿದರು.

               ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ಆಡಿದ್ದಾರೆ ಎನ್ನಲಾದ 'ಮೊಘಲ್ ದೊರೆ ಔರಂಗಜೇಬ್‌ನಂತೆ ಮೋದಿ ಅವರನ್ನು ಮಹಾರಾಷ್ಟ್ರದಲ್ಲಿ ಹೂಳುತ್ತೇವೆ' ಎಂಬ ಮಾತಿಗೆ ಪ್ರತಿಕ್ರಿಯಿಸಿದ ಪ್ರಧಾನಿ, 'ನಕಲಿ ಶಿವಸೇನಾದವರು ನನ್ನನ್ನು ಜೀವಂತವಾಗಿ ಹೂಳುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಜನರ ಬೆಂಬಲ ಕಳೆದುಕೊಂಡಿದ್ದಾರೆ ಮತ್ತು ಅವರ ರಾಜಕೀಯ ಅಂತ್ಯ ಸಮೀಪಿಸಿದೆ. ಭಾರತದ ಜನರೇ ನನಗೆ ಶ್ರೀರಕ್ಷೆ. ಅವರು ನನ್ನನ್ನು ಜೀವಂತವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದರು.

'ಬಿಜೆಪಿ ಅಧಿಕಾರ ಉಳಿಸಿಕೊಳ್ಳಲ್ಲ'

                    ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಶಿವಸೇನಾಗೆ (ಯುಬಿಟಿ) ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿರುವುದು ಅವರು ಲೋಕಸಭಾ ಚುನಾವಣೆಯ ನಂತರ ಅಧಿಕಾರ ಉಳಿಸಿಕೊಳ್ಳುವುದು ಖಾತರಿಯಿಲ್ಲ ಎನ್ನುವುದನ್ನು ಸೂಚಿಸುತ್ತದೆ ‌ಎಂದು ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯು ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಪಕ್ಷವು ಹೇಳುತ್ತಾ ಬಂದಿದ್ದು ಪ್ರಧಾನಿ ಅವರ ಸಲಹೆಯು ಅದನ್ನು ದೃಢಪಡಿಸುವಂತಿದೆ ಎಂದಿದ್ದಾರೆ. 'ಮೊದಲು ನೀವು ಅವರ (ಎನ್‌ಸಿಪಿ ಶರದ್ ಪವಾರ್‌ ಬಣ ಮತ್ತು ಶಿವಸೇನಾ ಯುಬಿಟಿ) ಮನೆಗಳನ್ನು ಒಡೆದಿರಿ ನಂತರ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದಿರಿ. ಈಗ ನಮ್ಮ ಮೈತ್ರಿಕೂಟಕ್ಕೆ ಸೇರಿಕೊಳ್ಳಿ ಎಂದು ಸೂಚಿಸುತ್ತಿದ್ದೀರಿ. ನೀವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ ಮತ್ತು ನಿಮಗೆ ಅವರ ಬೆಂಬಲ ಬೇಕು ಎಂಬುದು ಇದರ ಅರ್ಥ' ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries