ರಾಯ್‌ಬರೇಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಇಂದು (ಶುಕ್ರವಾರ) ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಬೆಳಿಗ್ಗೆ ಫುರ್ಸತ್‌ಗಂಜ್ ವಿಮಾನ ನಿಲ್ದಾಣಕ್ಕೆ ಬಂದ ರಾಹುಲ್ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು.
ರಾಯ್‌ಬರೇಲಿಯಲ್ಲಿ ಮೇ 20ರಂದು ಮತದಾನ
ಈ ಬಾರಿಯ ಲೋಕಸಭಾ ಚುನಾವಣೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ ಏಳೂ ಹಂತಗಳಲ್ಲಿ ಮತದಾನ ನಡೆಯಲಿದೆ.
ಮೊದಲ ಹಾಗೂ ಎರಡನೇ ಹಂತದ ಮತದಾನ ಈಗಾಗಲೇ ಮುಗಿದಿವೆ. ಉತ್ತರ ಪ್ರದೇಶದ ಒಟ್ಟು 16 ಕ್ಷೇತ್ರಗಳಿಗೆ ಏಪ್ರಿಲ್ 19 ರಂದು (8 ಕ್ಷೇತ್ರಗಳಿಗೆ) ಮತ್ತು ಏಪ್ರಿಲ್ 26 ರಂದು (8 ಕ್ಷೇತ್ರಗಳಿಗೆ) ಮತದಾನವಾಗಿದೆ.
ರಾಯ್‌ಬರೇಲಿ ಸೇರಿದಂತೆ 13 ಕ್ಷೇತ್ರಗಳಿಗೆ 5ನೇ ಹಂತದಲ್ಲಿ ಮೇ 20ರಂದು ಮತದಾನ ನಡೆಯಲಿದೆ.
ಅಮೇಥಿ ರೀತಿಯೇ ರಾಯ್ ಬರೇಲಿ 'ಕೈ' ಬಿಟ್ಟುಹೋಗಲಿದೆ: ಸ್ಮೃತಿ ಇರಾನಿಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಗಳು ಚುನಾವಣೆಗೂ ಮುನ್ನವೇ ಮೈತ್ರಿ ಮಾಡಿಕೊಂಡಿವೆ. ರಾಜ್ಯದಲ್ಲಿರುವ ಒಟ್ಟು 80 ಕ್ಷೇತ್ರಗಳ ಪೈಕಿ ಎಸ್‌ಪಿ 62, ಕಾಂಗ್ರೆಸ್ 17 ಹಾಗೂ ಟಿಎಂಸಿ ಒಂದು ಕ್ಷೇತ್ರವನ್ನು ಹಂಚಿಕೊಂಡಿವೆ.
ಎನ್‌ಡಿಎ ಮೈತ್ರಿಕೂಟದ ಬಹುದೊಡ್ಡ ಪಕ್ಷವಾಗಿರುವ ಬಿಜೆಪಿ 74 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಉಳಿದಂತೆ ಅಪ್ನಾ ದಳ ಹಾಗೂ ರಾಷ್ಟ್ರೀಯ ಲೋಕ ದಳ ತಲಾ ಎರಡು ಕಡೆ ಸ್ಪರ್ಧಿಸುತ್ತಿವೆ. ಎನ್‌ಐಎಸ್‌ಎಚ್‌ಎಡಿ, ಎಸ್‌ಬಿಎಸ್‌ಪಿ ಒಂದೊಂದು ಕಡೆ ಅಖಾಡಕ್ಕಿಳಿಯಲಿವೆ.
ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.