ಕಾಸರಗೋಡು: ತೃಕರಿಪುರದ ಇ.ಕೆ.ನಾಯನಾರ್ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕಾಸರಗೋಡು ಭೀಮನಡಿ ನಿವಾಸಿ ಅಭಿಜಿತ್ ಗಂಗಾಧರನ್ (19) ಮೃತ ದುರ್ದೈವಿ. ಇಂದು ಬೆಳಗ್ಗೆ ಹಾಸ್ಟೆಲ್‍ನಲ್ಲಿ ಅಭಿಜಿತ್ ಶವವಾಗಿ ಪತ್ತೆಯಾಗಿದ್ದಾನೆ.
ಪಂಚನಾಮೆ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಯಿತು. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ. ಅಭಿಜಿತ್ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ.
ಪ್ರಸ್ತುತ ಪರೀಕ್ಷೆ ನಡೆಯುತ್ತಿದೆ. ಅಭಿಜಿತ್ ನ ಬಳಿ ಸಹಪಾಠಿಯಾದ ಮತ್ತೊಬ್ಬ ವಿದ್ಯಾರ್ಥಿಯ ಹಾಲ್ ಟಿಕೆಟ್ ಇತ್ತು. ಆ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಗೆ ಹಾಲ್ ಟಿಕೆಟ್ ಪಡೆಯಲು ಬಂದರೂ ಅಭಿಜಿತ್ ಬಾಗಿಲು ತೆರೆಯಲಿಲ್ಲ. ಇದರೊಂದಿಗೆ ಮೊಬೈಲ್‍ಗೆ ಕರೆ ಮಾಡಿದ್ದಾರೆ. ಪೋನ್ ಸ್ವಿಚ್ ಆಫ್ ಆಗಿತ್ತು. ವಿದ್ಯಾರ್ಥಿಗಳು ಕೊಠಡಿಯ ಕಿಟಕಿ ತೆರೆದಾಗ ಅಭಿಜಿತ್ ಫ್ಯಾನ್‍ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಕಾಲೇಜಿಗೆ ಹಾಗೂ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.