ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನಕ್ಕಾಡಿನ ಆಸುಪಾಸು ಮನೆಯೊಳಗೆ ನಿದ್ರಿಸುತ್ತಿದ್ದ ಒಂಬತ್ತರ ಹರೆಯದ ಬಾಲಕಿಯನ್ನು ಅಪಹರಿಸಿ, ಮೈಮೇಲಿದ್ದ ಚಿನ್ನಾಭರಣ ಕಸಿದು ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಪೊಲೀಸರು ಪ್ರತ್ಯೇಕ ತಂಡ ರಚಿಸಿದ್ದಾರೆ. ಘಟನೆ ನಡೆದು ಎರಡು ದಿವಸ ಸಮೀಪಿಸುತ್ತಿದ್ದರೂ, ಆರೋಪಿ ಪತ್ತೆ ಸಾಧ್ಯವಾಗಿಲ್ಲ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಮೇಲ್ನೋಟದಲ್ಲಿ ಡಿವೈಎಸ್‍ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ವಿಶೇಷ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿತು. ಆರೋಪಿ ಮಾಸ್ಕ್ ಧರಿಸಿದ್ದು, ಮಲಯಾಳ ಭಾಷೆ ಮಾತನಾಡುತ್ತಿದ್ದನು ಎಂದು ಬಾಲಕಿ ತಿಳಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ರಸ್ತೆಬದಿ ಉಪೇಕ್ಷಿಸಿ ಪರಾರಿಯಾದ ಘಟನೆ ನಡೆದಿದೆ. ಅಲ್ಲಿಂದ ಸನಿಹದ ಮನೆಗೆ ತೆರಳಿದ ಬಾಲಕಿ ಮನೆಯವರನ್ನು ಎಚ್ಚರಿಸಿ ನಡೆದ ಘಟನೆ ತಿಳಿಸಿದ್ದಾಳೆ.
ಪಡನ್ನಕ್ಕಾಡಿನ ಮನೆಯಲ್ಲಿ ಬಾಲಕಿ ನಿದ್ರಿಸುತ್ತಿದ್ದು, ಬಾಲಕಿ ಅಜ್ಜ ಬೆಳಗಿನ ಜಾವ 3ಕ್ಕೆ ಎದ್ದು ಹಾಲು ಕರೆಯುವ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭ ಒಳಹೊಕ್ಕ ದುಷ್ಕರ್ಮಿ ಬಾಲಕಿಯನ್ನು ಅಪಹರಿಸಿ ಸುಮಾರು ಅರ್ಧ ಕಿ.ಮೀ ದೂರ ಕರೆದೊಯ್ದು, ಬಾಲಕಿ ಮೈಮೇಲಿದ್ದ ಚಿನ್ನಾಭರಣ ಕಸಿದು, ದೌರ್ಜನ್ಯಕ್ಕೂ ಯತ್ನಿಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.