ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರು ಮತಕ್ಕಾಗಿ ಜನರನ್ನು ಹಿಂದೂ-ಮುಸ್ಲಿಂ ಎಂದು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್.ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಆರೋಪಿಸಿದರು. ಜೊತೆಗೆ ಮೋದಿಯನ್ನು ಸೋಲಿಸಬೇಕು ಎಂದು ಜನರಿಗೆ ಕರೆ ನೀಡಿದರು.
ಶ್ರೀನಗರದ ಈದ್ಗಾದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಆಗ ಸಯ್ಯದ್ ರೂಹುಲ್ಲಾ ಮೆಹದಿ ಪರ ಅವರು ಪ್ರಚಾರ ಮಾಡಿದರು. 'ನರೇಂದ್ರ ಹಿಂದೂ ಹಾಗೂ ಮುಸಲ್ಮಾನರ ನಡುವೆ ದ್ವೇಷ ಹರಡುತ್ತಿದ್ದಾರೆ. ಅವರು ದೇಶದ ಪ್ರಧಾನಿ ಹಾಗೆ ವರ್ತಿಸುತ್ತಿಲ್ಲ. ವಿದೇಶಕ್ಕೆ ಹೋದಾಗ ಅವರು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರು ಹಾಗೂ ಬೌದ್ಧರ ಪ್ರಧಾನಿ. ಆದರೆ ಮತ ಕೇಳುವಾಗ ಅವರು ನಮ್ಮನ್ನು ವಿಭಜಿಸುವ ಯತ್ನ ಮಾಡುತ್ತಾರೆ' ಎಂದರು.
2019ರ ಪುಲ್ವಾಮ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯೇ ಹೊಣೆ ಎಂದೂ ಅವರು ದೂರಿದರು.
'ಸ್ಫೋಟಕ ಹೊತ್ತುಕೊಂಡಿದ್ದ ಕಾರು ಮೂರು ವಾರ ಅಲ್ಲೇ ಓಡಾಡುತ್ತಿತ್ತು ಎಂದು ಆಗಿನ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಪ್ರಧಾನಿಯವರ ತಪ್ಪಿನಿಂದಾಗಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. ಆದರೆ ನಾವು ಇನ್ನೊಂದು ರಾಷ್ಟ್ರವನ್ನು ದೂರುತ್ತಿದ್ದೇವೆ' ಎಂದರು.
'ಇದಕ್ಕೆ ಪ್ರತೀಕಾರವಾಗಿ ಭಾರತ ಬಾಲಾಕೋಟ್‌ನಲ್ಲಿ ವಾಯುದಾಳಿ ನಡೆಸಲಾಯಿತು. ಆದರೆ ಅಲ್ಲಿ ಒಂದು ವಿಮಾನ ಮಾತ್ರ ಹೊಡೆದುರುಳಿಸಲಾಯಿತು. ಯಾರೂ ಸಾವಿಗೀಡಾಗಿಲ್ಲ. ಕೆಲವು ಮರಗಳು ಧ್ವಂಸವಾದವಷ್ಟೇ' ಎಂದು ಹೇಳಿದರು.