ರಾಜಕೋಟ್: ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಎಸ್‌ಐಟಿ ಪೊಲೀಸರು 25 ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಟಿಆರ್‌ಪಿ ಗೇಮ್ ಝೋನ್‌ನ ಸಹಪಾಲುದಾರ ದಾವಲ್ ಥಕ್ಕರ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಮಂಗಳವಾರ ಸಂಜೆ ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ.
ಈ ಮೊದಲು ಗೇಮ್ ಝೋನ್‌ನ ಮಾಲೀಕರಾದ ಯುವರಾಜ್ ಸಿನ್ಹಾ ಸೋಲಂಕಿ ಹಾಗೂ ರಾಹುಲ್ ರಾಥೋಡ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಜೂನ್ 14ರವರಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆಯಲ್ಲಿ ಮೃತಪಟ್ಟ 27 ಜನರ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು ಡಿಎನ್‌ಎ ಮೂಲಕ ಸದ್ಯ 20 ಶವಗಳ ಗುರುತು ಪತ್ತೆ ಮಾಡಲಾಗಿದ್ದು ಅವುಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಮೃತರ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ತೀವ್ರ ಕಷ್ಟವಾಗಿದೆ. ಟಿಆರ್‌ಪಿ ಗೇಮ್ ಝೋನ್‌ನ ಮತ್ತೊಬ್ಬ ಸಹಪಾಲುದಾರ ಪ್ರಕಾಶ್ ಹಿರಾನ್ ಸಹ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕಾಶ್ ಸಹೋದರ ಪ್ರಕಾಶ್ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಗೇಮ್ ಝೋನ್ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅವರು ಸತ್ತಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಘಟನೆಯಲ್ಲಿ ವಾರಾಂತ್ಯದ ಮೋಜಿಗೆ ಹೋಗಿದ್ದ 14ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯ ತನಿಖೆಯ ಹೊಣೆಯನ್ನು ಗುಜರಾತ್ ಸರ್ಕಾರ ಎಸ್‌ಐಟಿಗೆ ವಹಿಸಿದೆ.