ತಿರುವನಂತಪುರಂ: ಆಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಹಕ್ಕಿಜ್ವರ ಪ್ರಕರಣಗಳ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯ ಪಶು ಕಲ್ಯಾಣ ಇಲಾಖೆ ಸಚಿವೆ ಜೆ. ಚಿಂಚು ರಾಣಿ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯುತ್ತಿದೆ.
ಮೇಲ್ಕಂಡ ಜಿಲ್ಲೆಗಳಲ್ಲಿನ ವಿವಿಧ ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಪರಿಶೀಲನೆ ಬಿಗುಗೊಳಿಸಲಾಗಿದೆ. ಹಾಗೂ ಇಲಾಖೆಯ ಅಧೀನದಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸಲು ಉನ್ನತ ಮಟ್ಟದ ಸಭೆಯನ್ನು ನಡೆಸಲಾಯಿತು.
ಪತ್ತನಂತಿಟ್ಟದ ನಿರಣಂನಲ್ಲಿರುವ ಸರ್ಕಾರಿ ಬಾತುಕೋಳಿ ಸಾಕಾಣಿಕೆ ಕೇಂದ್ರದಿಂದ ಹಕ್ಕಿ ಜ್ವರದ ವರದಿ ಬಂದ ನಂತರ ಸಚಿವರು ಸಭೆ ಕರೆದಿದ್ದಾರೆ. ನಿರಣಂ ಸರ್ಕಾರಿ ಬಾತುಕೋಳಿ ಸಂವರ್ಧನಾ ಕೇಂದ್ರದಲ್ಲಿ ಮಂಗಳವಾರದಿಂದ 4,081 ಬಾತುಕೋಳಿಗಳನ್ನು ಕೊಲ್ಲಲು ಅಧಿಕೃತ ಅಧಿಸೂಚನೆ ನೀಡಲಾಗಿದೆ.
ಫಾರ್ಮ್‍ನಲ್ಲಿ ಬಾತುಕೋಳಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನಂತರ, ಭೋಪಾಲ್‍ನಲ್ಲಿರುವ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಯಲ್ಲಿ ಮಾದರಿಯನ್ನು ಪರೀಕ್ಷಿಸಿದಾಗ ಹಕ್ಕಿ ಜ್ವರ ದೃಢಪಟ್ಟಿದೆ. ಫಾರ್ಮ್‍ನಲ್ಲಿ ಸುಮಾರು ಆರು ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ.