HEALTH TIPS

ಕಾಸರಗೋಡು ಸಿವಿಲ್‍ಸ್ಟೇಶನ್ ವಠಾರದ ರಸ್ತೆ ಹೊಂಡಮಯ-ಮಳೆಗಾಲದಲ್ಲಿ ನಿತ್ಯ ಕೆನ್ನೀರಿನ ಸಿಂಚನ

         ಕಾಸರಗೋಡು: ಜಿಲ್ಲಾಡಳಿತದ ಪ್ರಮುಖ ಕಟ್ಟಡಗಳನ್ನು ಹೊಂದಿರುವ ಕಾಸರಗೋಡು ವಿದ್ಯಾನಗರದ ಸಿವಿಲ್ ಸ್ಟೇಶನ್ ಪರಿಸರದ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ಅಧಿಕಾರಿಗಳು ಕಂಡೂ ಕಾಣದಂತೆ ಇದೇ ಹಾದಿಯಾಗಿ ತಮ್ಮ ವಾಃನಗಳಲ್ಲಿ ಸಂಚರಿಸುತ್ತಿದ್ದಾರೆ!

          ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ, ಅಬಕಾರಿ, ಕೃಷಿ, ಪ.ಜಾತಿ-ಪ. ವರ್ಗ ಅಭಿವೃದ್ಧಿ ಇಲಾಖೆ, ಪಿಆರ್‍ಡಿ, ಪ್ರಾದೇಶಿಕ ಸಾರಿಗೆ ಕಚೇರಿ ಸೇರಿದಂತೆ ನೂರಕ್ಕೂ ಮಿಕ್ಕಿ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಸಮುಚ್ಛಯ ಹೊಂದಿದ ಸಿವಿಲ್ ಸ್ಟೇಶನ್ ಸ್ಥಿತಿ ಅಯೋಮಯವಾಗಿದೆ. ಹಲವು ಎಕರೆ ಪ್ರದೇಶದಲ್ಲಿ ಕಟ್ಟಡ ಸಮುಚ್ಛಯ ವಿಸ್ತರಣೆಗೊಂಡಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆ ಹೊರತುಪಡಿಸಿದರೆ, ಉಳಿದೆಲ್ಲಾ ಕಡೆ ಶಿಥಿಲಗೊಂಡಿದೆ. 

         ಸಿವಿಲ್ ಸ್ಟೇಶನ್ ಕಚೇರಿಯ ನೂರಾರು ಮಂದಿ ಸಿಬ್ಬಂದಿ ಆಹಾರ ಸೇವಿಸಲು ಆಶ್ರಯಿಸುತ್ತಿರುವ ಕ್ಯಾಂಟೀನ್ ಸ್ಥಿತಿಯೂ ಶೋಚನೀಯವಾಗಿದೆ.  ಜಿಲ್ಲಾಧಿಕಾರಿ ಕಚೇರಿ ಹಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್ ಸುತ್ತು ಕಾಡುಬೆಳೆದು ಶುಚಿತ್ವ ಮರೀಚಿಕೆಯಾಗಿದೆ. ಅನತಿ ದೂರದಲ್ಲಿರುವ ವಿದ್ಯಾನಗರ ಪೊಲೀಸ್ ಠಾಣೆ ಕಟ್ಟಡ ವಠಾರವೂ ಕುರುಚಲು ಕಾಡು ಬೆಳೆದು ಮಳೆಗಾಲದಲ್ಲಿ ಇಲ್ಲಿಗೆ ತೆರಳಲೂ ಅಸಹ್ಯ ಹುಟ್ಟಿಸುತ್ತಿದೆ. ಇನ್ನು ಜಿಲ್ಲಾ ಪಂಚಾಯಿತಿ ಕಟ್ಟಡ ಪರಿಸರದಿಂದ ಕ್ಯಾಂಟೀನ್  ಮೂಲಕ ಪೊಲೀಸ್ ಠಾಣೆಗೆ ತೆರಳುವ ಹಾದಿಯೂ ದುರ್ಗಮವಾಗಿದೆ. ಇಲ್ಲಿನ ರಸ್ತೆ ಡಾಂಬಾರು ಕಾಣದೆ ವರ್ಷಗಳೇ ಸಂದಿದೆ. ಬೋಲ್ಡ್ರಸ್ ಹರಡಿರುವ ರಸ್ತೆಯಲ್ಲಿ ಲಘು ವಾಹನಗಳಿಗೆ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.   ಕೆಲವೆಡೆ ರಸ್ತೆ ಹೊಂಡ ಬಿದ್ದು, ಆಳೆತ್ತರಕ್ಕೆ ನೀರು ತುಂಬಿಕೊಂಡಿರುತ್ತದೆ. ಹೊಂಡದ ಆಳ ತಿಳಿಯದೆ ಆಗಮಿಸುವ ದ್ವಿಚಕ್ರ ವಾಹನ, ಆಟೋರಿಕ್ಷಾಗಳು ಇಲ್ಲಿಂದ ಸಂಚರಿಸಲು ಹರಸಾಹಸಪಡಬೇಕಾಗುತ್ತಿದೆ. ಇನ್ನು ಜಿಲ್ಲಾ ಪಂಚಾಯಿತಿ ಕಟ್ಟಡದ ಸನಿಹದಿಂದ ಸಿವಿಲ್‍ಸ್ಟೇಶನ್ ಪ್ರವೆಸಿಸುವ ಕಾಲು ಹಾದಿಯೂ ನೀರು ತುಂಬಿಕೊಂಡು ನಡೆದಾಡಲೂ ಸಾಧ್ಯವಾಗದ ಸಥಿತಿಯಿದೆ. 

         ಇನ್ನು ಪೊಲೀಸರು ವಶಪಡಿಸಿ ತಂದು ಠಾಣೆ ವಠಾರದಲ್ಲಿ  ನಿಲ್ಲಿಸುತ್ತಿರುವ ವಾಹನಗಳಲ್ಲಿ ತರಗೆಲೆ, ಮಣ್ಣು ತುಂಬಿಕೊಂಡಿದ್ದು, ಮಳೆಗಾಲದಲ್ಲಿ ಸೊಳ್ಳೆ ಉತ್ಪಾದನಾ ಕೇಂದ್ರಗಳಾಗುತ್ತಿದೆ. ಇನ್ನು ಸಿವಿಲ್ ಸ್ಟೇಶನ್ ವಠಾರ ತ್ಯಾಜ್ಯದ ಕೊಂಪೆಯಾಗಿ ಬೆಳೆಯುತ್ತಿದೆ. ಶುಚೀಕರಣ ಕಾರ್ಯ ಇಲ್ಲಿ ವರ್ಷಕ್ಕೊಮ್ಮೆ ಮಾತ್ರ ಸೀಮಿತವಾಗುತ್ತಿದೆ. ಉಳಿದ ದಿನಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ತ್ಯಾಜ್ಯ ವಸ್ತು ಅಲ್ಲಲ್ಲಿ ಚದುರಿಕೊಂಡಿರುತ್ತದೆ. 

ರಸ್ತೆಯಲ್ಲೇ ಆರ್‍ಟಿಓ ತಪಾಸಣೆ:

             ಸಿವಿಲ್‍ಸ್ಟೇಶನ್ ವಠಾರದಲ್ಲಿ ಕಾರ್ಯಾಚರಿಸುತ್ತಿರುವ ಆರ್‍ಟಿಓ ಕಚೇರಿಯ ಹಿಂಭಾಗದ ರಸ್ತೆಯಲ್ಲೇ ಕೆಲವೊಮ್ಮೆ ಆಟೋರಿಕ್ಷಾಗಳ ತಪಾಸಣಾ ಕಾರ್ಯ ನಡೆಯುತ್ತಿದೆ. ಆರ್‍ಟಿಓ ಕಚೇರಿ ಹಿಂಭಾಗಕ್ಕೆ ಹೊಂಡಮಯ ರಸ್ತೆ ದಾಟಿಯೇ ಇಲ್ಲಿಗೆ ಬರಬೇಕು. ಜಿಲ್ಲಾ ಪಂಚಾಯಿತಿ ಸನಿಹದ ಯೋಜನಾ ಕಚೇರಿಯ ಅಂಚಿನಿಂದ ಸಾಗುತ್ತಿರುವ ಈ ರಸ್ತೆ ಹೊಂಡಬಿದ್ದು, ಇಲ್ಲಿ ನಿತ್ಯ ಕೆನ್ನೀರಿನ ಸಿಂಚನವಾಗುತ್ತಿದೆ. ಆದರೆ, ಆರ್‍ಟಿಓ ಅಥವಾ ಇತರ ಇಲಾಖೆ ಸಿಬ್ಬಂದಿ ಇದುವರೆಗೆ ರಸ್ತೆ ದುರಸ್ತಿ ಕಾರ್ಯದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ರಸ್ತೆ ಶೋಚನೀಯಾವಸ್ಥೆ ನಿತ್ಯ ಸಮಸ್ಯೆಯಾಗುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries