HEALTH TIPS

'ಟೆಲಿಪೋರ್ಟೇಷನ್‌' ಸಾಧ್ಯವಾಗಲಿದೆಯೆ?

          ನೀವೀಗ ಓದುವ ವಿಷಯವು ಕೊಂಚ ವಾಸ್ತವಕ್ಕೆ ಹತ್ತಿರ ಇಲ್ಲದ್ದು ಅಥವಾ ಕಾಲ್ಪನಿಕ ಎನ್ನಿಸಬಹುದು. ಅದು ವರ್ತಮಾನ ಕಾಲದಲ್ಲಿ ಈ ವಿಚಾರವು ಕಲ್ಪನೆ ಹೌದು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ, ಈ ಕಲ್ಪನೆಯು ವಾಸ್ತವವಾಗುವ ದಿನಗಳು ಹತ್ತಿರವಾಗುತ್ತಿವೆ. 'ಸ್ಟಾರ್‌ ವಾರ್ಸ್‌'ನಂತಹ ಚಲನಚಿತ್ರಗಳಲ್ಲಿ ವಸ್ತುಗಳನ್ನು, ಮಾನವರನ್ನು ಕ್ಷಣಾರ್ಧದಲ್ಲಿ ಮಾಯ ಮಾಡಿ ಮತ್ತೊಂದು ಕಡೆಗೆ ಸಾಗಿಸಬಲ್ಲ ಕಾಲ್ಪನಿಕ ತಂತ್ರಜ್ಞಾನದ ವಿಚಾರವಿದು.

           ಇದನ್ನು ಸಿದ್ಧಾಂತದ ಹಂತದಲ್ಲಿ ಸಾಬೀತು ಮಾಡಲು ವಿಜ್ಞಾನಿಗಳು ಯಶಸ್ವಿಯಾಗಿ ಬಹು ದೊಡ್ಡ ಹೆಜ್ಜೆಯನ್ನು ಇರಿಸಿದ್ದಾರೆ.

               ಫಿನ್‌ಲ್ಯಾಂಡ್‌ನ ಟುರ್ಕು ವಿಶ್ವವಿದ್ಯಾನಿಲಯ ಹಾಗೂ ಚೀನಾದ ಹೆಫೈ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬಹುದೊಡ್ಡ ಸಂಶೋಧನೆಯನ್ನು ಮಾಡಿದ್ದಾರೆ. ಇವರ ಸಂಶೋಧನೆಯ ಪ್ರಕಾರ ಯಾವುದೇ ಧಾತುಗಳು ಅಥವಾ ಅಣುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಯಾವುದೇ ರೀತಿಯ ಭೌತಿಕ ಮಾಧ್ಯಮದ ಸಹಾಯವಿಲ್ಲದಂತೆ ಸಾಗಿಸಬಹುದಾಗಿದೆ. ಇದರಿಂದ ಸಾಗಣೆಯ ಬಗ್ಗೆ ಇದುವರೆಗೆ ಇರುವ ಸಿದ್ಧಾಂತಗಳು, ಸಾಗಣೆಗೆ ಬಳಕೆಯಲ್ಲಿರುವ ಮಾಧ್ಯಮಗಳು, ಅದಕ್ಕೆ ಬೇಕಾಗುವ ಇಂಧನಗಳು ಭವಿಷ್ಯದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಒಂದು ಹೊಸ ಬಗೆಯ ಸಾಗಣೆ ವಿಧಾನವೇ ಜಾರಿಗೆ ಬರಲಿದೆ.

                ಇಂಗ್ಲಿಷ್‌ನಲ್ಲಿ ಇದನ್ನು 'ಟೆಲಿಪೋರ್ಟೇಷನ್‌' ಎಂದು ಕರೆಯಲಾಗುತ್ತದೆ. ಇದರ ಸರಳ ವ್ಯಾಖ್ಯಾನವನ್ನು 'ವಿದ್ಯುನ್ಮಾನ ಸಾಗಣೆ' ಎನ್ನಬಹುದು. ಒಂದು ಸನ್ನಿವೇಶವನ್ನು ಇಲ್ಲಿ ಹೋಲಿಸಿಕೊಳ್ಳಿ. ಒಂದು ಇ-ಮೇಲ್‌ ಬರೆಯಬೇಕಾದರೆ ಅದನ್ನು ಟೈಪಿಸಿ ಇ-ಮೇಲ್‌ ಸೇವೆಯ ಮೂಲಕ ಕಳುಹಿಸಿದಾಗ ನೇರವಾಗಿ ಅಕ್ಷರಗಳೇ ಸಾಗಣೆಯಾಗುವುದಿಲ್ಲ. ಬದಲಿಗೆ, ಅಕ್ಷರಗಳು ಸಂಖ್ಯೆಗಳಾಗಿ ಮಾರ್ಪಾಟಾಗಿ, ಆ ಸಂಖ್ಯೆಗಳು ವಿದ್ಯುತ್‌ ಸಂಜ್ಞೆಗಳಾಗಿ ಬದಲಾಗಿ, ಆ ಸಂಜ್ಞೆಗಳನ್ನು ವಿವಿಧ ಬಗೆಯ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಸಾಗಿಸಿ, ಮತ್ತೊಂದೆಗೆ ಸ್ವೀಕರಿಸಿ, ಆ ವಿದ್ಯುನ್ಮಾನ ಸಂಜ್ಞೆಗಳನ್ನು ಸೂಕ್ತರೀತಿಯಲ್ಲಿ ಓದಿ, ಅರ್ಥೈಸಿಕೊಂಡು ಕಂಪ್ಯೂಟರ್‌ ಪ್ರಾಸೆಸರ್‌ ಅಥವಾ ಇ-ಮೇಲ್‌ ಸೇವೆ ನೀಡುವ ಜಾಲತಾಣವು, ಮತ್ತೆ ಪತ್ರದ ಸ್ವರೂಪವನ್ನು ನಮಗೆ ನೀಡುತ್ತದೆ. ಇದೇ ವಿಸ್ತರಿಸಿ ಇಂದು ಆಡಿಯೊ-ವಿಡಿಯೊ ಫೈಲ್‌ಗಳು, ಫೋಟೊಗಳು ಇತ್ಯಾದಿ ದತ್ತಾಂಶಗಳನ್ನು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಈಗಾಗಲೇ ಕಳುಹಿಸಲಾಗುತ್ತದೆ. ಈ ಬಗೆಯ ಡಿಜಿಟಲ್‌ ಸ್ವರೂಪದ ದತ್ತಾಂಶಗಳ ರೀತಿಯೇ ಭೌತಿಕ ಸ್ವರೂಪ ಹೊಂದಿರುವ ವಿವಿಧ ಬಗೆಯ ವಸ್ತುಗಳು, ಜೀವಿಗಳನ್ನೂ ಸಾಗಿಸಬಹುದೇ ಎಂಬ ಪ್ರಶ್ನೆ ಬಹುದಿನಗಳಿಂದ ಮಾನವನನ್ನು ಕಾಡುತ್ತಿದೆ. ಗಣಿತವಿಜ್ಞಾನದ ಪ್ರಕಾರ, ಸಿದ್ಧಾಂತದ ಸ್ವರೂಪದಲ್ಲಿ ಇದು ಸಾಧ್ಯ ಎನ್ನುತ್ತಿದ್ದಾರೆ ವಿಜ್ಞಾನಿಗಳು.
              ಪ್ರಪಂಚದ ಯಾವುದೇ ದತ್ತಾಂಶ ಅಥವಾ ವಸ್ತುವನ್ನು ಸಂಜ್ಞೆಯಾಗಿ ಕಳುಹಿಸಬಹುದು ಎನ್ನುವುದು ವಿಜ್ಞಾನಿಗಳ ವಾದ. ಉದಾಹರಣೆಗೆ ಜೀವಿಗಳಲ್ಲಿರುವ ಡಿಎನ್‌ಎ(ವರ್ಣತಂತು)ಗಳು ವಾಸ್ತವದಲ್ಲಿ ಸಂಪೂರ್ಣ ಗಣಿತಸ್ವರೂಪದಲ್ಲಿ ಇರುತ್ತವೆ. ಇವು ವಂಶವಾಹಿಗಳಾಗಿರುತ್ತವೆ. ಇವು ಕೇವಲ ಸಂಜ್ಞೆಗಳು. ಹಾಗಾಗಿ, ಇವು ತಮ್ಮ ಗುಣಲಕ್ಷಣಗಳು ತಮ್ಮ ಮೂಲಕ ತಮ್ಮ ಮುಂದಿನ ಸಂತಾನದ ಜೀವಿಗಳಿಗೂ ಕೊಂಡೊಯ್ಯುತ್ತವೆ. ಅಲ್ಲದೇ, ಡಿಎನ್‌ಎ ಕೇವಲ ಸಂಜ್ಞೆಗಳಾಗಿರುವ ಕಾರಣ ಅವಕ್ಕೆ ಸಾವಿಲ್ಲ. ಅವು ಶಾಶ್ವತವಾಗಿ ಜೀವಿಯಿಂದ ಜೀವಿಗೆ ಅನೇಕ ತಲೆಮಾರುಗಳವರೆಗೆ ಜೀವಿಸುತ್ತಲೇ ಇರುತ್ತದೆ. ಹಾಗಾಗಿ, ನಿಜವಾದ ಅರ್ಥದಲ್ಲಿ ಡಿಎನ್‌ಎಗೆ ಸಾವಿಲ್ಲ.

             ಇದೇ ಕಾರಣದಿಂದ ಡಿಎನ್‌ಎಗಳನ್ನು ಸೂಕ್ತ ರೀತಿಯಲ್ಲಿ ಅರ್ಥ ಮಾಡಿಕೊಂಡು ಅವುಗಳ ಮೂಲಕ ಜೀವಿಗಳ ಇಡೀ ದೇಹದ ಹಸ್ತಾಕ್ಷರವನ್ನು ಗುರುತಿಸಿ ಅದಕ್ಕೊಂದು ಡಿಜಿಟಲ್‌ ಸ್ವರೂಪ ಕೊಡಲು ಸಾಧ್ಯ ಎನ್ನುವುದು. ಬಳಿಕ ಅದನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ವಿದ್ಯುತ್‌ ಸಂಜ್ಞೆಗಳಂತೆ ಸಾಗಿಸಿ, ಮತ್ತೊಂದೆಡೆ ಅದನ್ನು ಸ್ವೀಕರಿಸಿ ಅದಕ್ಕೆ ಮೂಲರೂಪ ಕೊಡಬಹುದು ಎನ್ನುತ್ತಿದ್ದಾರೆ, ವಿಜ್ಞಾನಿಗಳು.

             ಆದರೆ, ಇಲ್ಲಿ ಏಳುವ ಅತಿ ದೊಡ್ಡ ಪ್ರಶ್ನೆಯೇನೆಂದರೆ, ಭೌತಿಕವಾಗಿ ದೇಹವನ್ನೇನೋ ಡಿಜಿಟಲ್‌ ರೂಪದಲ್ಲಿ ಸಾಗಿಸಬಹುದು. ಆದರೆ, ಅದರೊಳಗಿನ ಜೀವವನ್ನೂ ಸಾಗಿಸಬಹುದೇ ಎಂಬುದು. ಇದಕ್ಕೆ ಸದ್ಯಕ್ಕೆ ವಿಜ್ಞಾನಿಗಳ ಬಳಿ ಉತ್ತರವಿಲ್ಲ. ಅದು ಬಹು ದೂರದ ವಿಚಾರ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಲ್ಲದೇ, 'ನಮ್ಮ ಉದ್ದೇಶ ಅಷ್ಟೊಂದು ಕ್ಲಿಷ್ಟಕರ ಸಾಗಣೆಯನ್ನು ಮಾಡುವುದು ಅಲ್ಲವೇ ಅಲ್ಲ. ಜೀವವಿರದ ವಸ್ತುಗಳನ್ನು ಕೇವಲ ಕೆಲವೇ ಅಣುಪ್ರಮಾಣದ ಗಾತ್ರದಲ್ಲಿ ಸಾಗಿಸಬಹುದೇ ಎಂಬುದನ್ನು ಕಂಡುಕೊಳ್ಳುವುದು ಮಾತ್ರವೇ ಆಗಿದೆ. ಇದನ್ನು ನಾವು ಈ ಸಿದ್ಧಾಂತದ ಸ್ವರೂಪದಲ್ಲಿ ಸಾಬೀತು ಮಾಡಿದ್ದೇವೆ. ಅಣು ಗಾತ್ರ ಪ್ರಮಾಣದಲ್ಲಿ ವಿದ್ಯುನ್ಮಾನ ಸಂಜ್ಞೆಗಳನ್ನು ಸಾಗಿಸಲು ನಮಗೀಗ ಸಾಧ್ಯವಾಗಿದೆ' ಎಂದು ಟುರ್ಕು ವಿಶ್ವವಿದ್ಯಾನಿಲಯದ ವಿಜ್ಞಾನಿ ಜೈಕ್ರಿ ಪೀಲೊ ವ್ಯಾಖ್ಯಾನಿಸಿದ್ದಾರೆ. ಇವರೊಂದಿಗೆ ವಿಜ್ಞಾನಿಗಳಾದ  ಓಲಿ ಸಿಲ್ಟಾನೆನ್‌, ಜಾವ್ ಡಿ ಲಿಯೂ ಜಂಟಿಯಾಗಿ ಈ ಸಂಶೋಧನಕಾರ್ಯವನ್ನು ನಡೆಸಿದ್ದಾರೆ.

               'ಹಂತ ಹಂತವಾಗಿ ನಾವು ಹೊಸ ಸಾಗಣೆ ಹಾಗೂ ಸಾಗಣೆಯ ವಿಧಾನ, ಮಾಧ್ಯಮಗಳಿಗೆ ಹೊಸ ಸ್ವರೂಪಗಳನ್ನು ಕೊಡಬೇಕಾಗಿದೆ. ಅದನ್ನು ಮಾತ್ರವೇ ಈ ಸಾಧಿಸಲಾಗಿದೆ. ಇದು ಮಾನವ ಜನಾಂಗಕ್ಕೆ ಒಂದು ಅತಿ ಸಣ್ಣ ಹೆಜ್ಜೆ. ಆದರೆ, ಮುಂದೊಂದು ದಿನ ನಾವು ಚಲನಚಿತ್ರಗಳು, ಟಿವಿ ಸೀರಿಯಲ್‌ಗಳಲ್ಲಿ ನೋಡುವಂತೆ ಜೀವ ಸಹಿತ 'ಟೆಲಿಪೋರ್ಟಿಂಗ್‌' ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ನಂಬಿದ್ದೇವೆ' ಎಂದಿದ್ದಾರೆ, ಈ ವಿಜ್ಞಾನಿಗಳು.

ಎಲ್ಲೆಲ್ಲಿ ಬಳಕೆ?:

             ಈ ತಂತ್ರಜ್ಞಾನವು ದಿನಬಳಕೆಯ ಎಲ್ಲ ಕೆಲಸಗಳಲ್ಲಿ, ಹಂತಗಳಲ್ಲಿ ಬಳಕೆಯಾಗಬಲ್ಲದು. ಆದರೆ, ರಕ್ಷಣಾಕ್ಷೇತ್ರ, ಬಾಹ್ಯಾಕಾಶಯಾನ, ಸಾರಿಗೆ, ಸಂಚಾರ, ಸಾಗಣೆಯಂತಹ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುವ ಶಕ್ತಿಯನ್ನು ಹೊಂದಿದೆ. ಕಾಲ-ದೇಶಗಳನ್ನು ಅತಿ ಕಿರಿದು ಮಾಡಬಲ್ಲ, ಸಮಯ, ಇಂಧನ ಉಳಿಸುವ ಅತಿ ಮುಖ್ಯ ನವೀನ ತಂತ್ರಜ್ಞಾನ ಇದಾಗಲಿದೆ ಎಂದು ವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries