ಪಟ್ನಾ: 'ಯಾವುದೇ ಸರ್ಕಾರವು ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಭಾರತ ಸಂವಿಧಾನದ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಮೀಸಲಾತಿಯನ್ನು ಯಾವ ಶಕ್ತಿಯೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಎಂದಿಗೂ ಅಂಬೇಡ್ಕರ್ ಅವರಿಗೆ ಸರಿಯಾದ ಗೌರವ ನೀಡಿಲ್ಲ' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಶನಿವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಹಾಗೂ ಮೀಸಲಾತಿಯನ್ನು ರದ್ದುಗೊಳಿಸುತ್ತಾರೆ ಎಂದು ಸುಳ್ಳು ಸುದ್ದಿಗಳನ್ನು ಕಾಂಗ್ರೆಸ್ ಹರಡುತ್ತಿದೆ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಓಲೈಕೆ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್, ಎಸ್‌ಸಿ -ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲು ಪ್ರಯತ್ನಿಸುತ್ತಿದೆ ಎಂದು ಜೋಶಿ ಹೇಳಿದ್ದಾರೆ.
'1990ರಲ್ಲಿ ವಿ.ಪಿ ಸಿಂಗ್ ಕೇಂದ್ರ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಅವರಿಗೆ 'ಭಾರತ ರತ್ನ' ನೀಡಿ ಗೌರವಿಸಿತ್ತು. ಆಗ ಬಿಜೆಪಿ ಕೂಡ ಬೆಂಬಲಿಸಿತ್ತು. ಆದರೆ ಕಾಂಗ್ರೆಸ್ ಅವರನ್ನು( ಅಂಬೇಡ್ಕರ್) ಪ್ರತಿ ಹಂತದಲ್ಲೂ ಅವಮಾನನಿಸಿದೆ' ಎಂದು ಜೋಶಿ ಹೇಳಿದ್ದಾರೆ.
'ಇಂಡಿಯಾ'ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ಪ್ರಧಾನಿ ಅಭ್ಯರ್ಥಿ ಯಾರೆಂದು ಆಯ್ಕೆ ಮಾಡದೇ, ಕೇವಲ ಒಂದು ವರ್ಗವನ್ನು ಓಲೈಸಲು ಹಾಗೂ ರಕ್ಷಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದಿದ್ದಾರೆ.