ಕಾಸರಗೋಡು: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿಸಿ ದೌರ್ಜನ್ಯವೆಸಗಿರುವುದಲ್ಲದೆ, ಮೈಮೇಲಿನ ಚಿನ್ನಾಭರಣ ಕಸಿದು ತೆಗೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನಕ್ಕಾಡಿನ ಆಸುಪಾಸು ಘಟನೆ ನಡೆದಿದ್ದು, ಈ ಪ್ರದೇಶದಿಂದ ಸಂಗ್ರಹಿಸಲಾದ ಸಿಸಿ ಟಿವಿ ದೃಶ್ಯಾವಳಿ ಪರಿಶೋಧನೆ ನಂತರ ಈ ಪ್ರದೇಶದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತದ್ದ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇವರಲ್ಲಿ ಒಬ್ಬಾತ ಬಾಲಕಿ ಅಪಹರಣದ ಆರೋಪಿ ಎಂದು ಸಂಶಯಿಸಲಾಗಿದ್ದು, ಉತ್ತರ ವಲಯ ಡಿ.ಐ.ಜಿ ಭೇಟಿ ನಂತರ ಆರೋಪಿಯ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದುವರೆಗೆ 75ಕ್ಕೂ ಹೆಚ್ಚು ಸಿಸಿ ಕ್ಯಾಮರಾ ದೃಶ್ಯಾವಳಿಯ ಮಾಹಿತಿ ಸಂಗ್ರಹಿಸಿದ್ದಾರೆ. ಕಾಞಂಗಾಡು, ಪಡನ್ನಕ್ಕಾಡ್, ಹೊಸದುರ್ಗ ಆಸುಪಾಸಿನ 200ಕ್ಕೂ ಹೆಚ್ಚು ಮನೆಗಳಲ್ಲಿ ತಪಾಸಣೆ ನಡೆಸಲಾಗಿದೆ.
ಕಾಞಂಗಾಡು ಡಿವೈಎಸ್‍ಪಿ ವಿ. ರತೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ತ್ವರಿತಗತಿಯಲ್ಲಿ ಸಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸುವುದು, ಸಮಾನ ಪ್ರಕರಣಗಳಲ್ಲಿ ಜೈಲುಪಾಲಾಗಿ, ಇತ್ತೀಚೆಗಷ್ಟೆ ಹೊರಬಂದಿರುವವರ ಬಗ್ಗೆ ಮಾಹಿತಿ ಸಂಗ್ರಹ, ಮಾದಕ ದ್ರವ್ಯ ಮಾರಾಟ, ಸಾಗಾಟ ನಡೆಸುವವರ ಬಗ್ಗೆ ನಿಗಾ ವಹಿಸುವುದರ ಜತೆಗೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲು ತನಿಖಾ ತಂಡ ತೀರ್ಮಾನಿಸಿದೆ.