ಪ್ರಯಾಗ್‌ರಾಜ್: ಕೃಷ್ಣ ಜನ್ಮಭೂಮಿ ದೇವಸ್ಥಾನವು ಸಂರಕ್ಷಿತ ಸ್ಮಾರಕವಾಗಿದೆ. ಹಾಗಾಗಿ, ಈ ದೇವಸ್ಥಾನದ ಮೇಲ್ವಿಚಾರಣೆಯು ಪ್ರಾಚೀನ ಸ್ಮಾರಕಗಳು ಹಾಗೂ ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ಹಿಂದೂ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್‌ಗೆ ಗುರುವಾರ ತಿಳಿಸಿದ್ದಾರೆ.
ಅರ್ಜಿದಾರರ ಪರ ಹಾಜರಿದ್ದ ವಕೀಲ ಹರಿಶಂಕರ ಜೈನ್, ಪೂಜಾಸ್ಥಳಗಳ ಕಾಯ್ದೆಯ ಅವಕಾಶಗಳು ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಪಟ್ಟ ಪ್ರಕರಣಕ್ಕೆ ಅನ್ವಯ ಆಗುವುದಿಲ್ಲ ಎಂದು ಅರುಹಿದರು.
ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ವೇಳೆ, ಹೈಕೋರ್ಟ್‌ಗೆ ಈ ವಿಷಯ ತಿಳಿಸಲಾಯಿತು.
'ಪೂಜೆ ಸಲ್ಲಿಸುವ ಮೂಲಭೂತ ಹಕ್ಕನ್ನು ಕಾಲಪರಿಮಿತಿ ಕಾಯ್ದೆ ಮೂಲಕ ಕಸಿದುಕೊಳ್ಳಲಾಗದು. ಅಲ್ಲದೇ, ದೇವಸ್ಥಾನ ಮತ್ತು ಭಕ್ತರಿಗೆ ತಮ್ಮ ವಾದ ಮಂಡಿಸುವ ಹಕ್ಕಿದೆ' ಎಂದೂ ಜೈನ್ ತಿಳಿಸಿದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಯಂಕ್ ಕುಮಾರ್ ಜೈನ್, ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿದರು.