ನವದೆಹಲಿ: ಭಾರತದ ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ ಕಾಣಿಸುತ್ತಾರೆ. ಉತ್ತರ ಭಾರತದ ಜನರು ಬಹುಶಃ ಬಿಳಿಯರಂತೆ ಕಂಡರೆ, ದಕ್ಷಿಣ ಭಾರತದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮಾತ್ರ ಎಲ್ಲರನ್ನೂ ಒಟ್ಟಿಗೆ ನೋಡಲು ಸಾಧ್ಯ.
ನಾವೆಲ್ಲರೂ ಸೋದರ-ಸೋದರಿಯರಂತೆ ಜೀವಿಸುತ್ತಿದ್ದೇವೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಸ್ಯಾಮ್ ಪಿತ್ರೋಡಾ ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
'ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ಜಗತ್ತಿಗೆ ಅದ್ಭುತ ಉದಾಹರಣೆಯಾಗಿದೆ. ದೇಶದ ಜನರು ವಿವಿಧ ಭಾಷೆ, ಆಹಾರ ಪದ್ಧತಿಯನ್ನು ಗೌರವಿಸುತ್ತಾರೆ. ಇದು ನಾನು ನಂಬುವ ಭಾರತವಾಗಿದೆ. ಇಲ್ಲಿ ಪ್ರತಿಯೊಬ್ಬರೂ ಸ್ವಲ್ಪಮಟ್ಟಿಗೆ ರಾಜಿ ಮಾಡಿಕೊಳ್ಳುತ್ತಾರೆ' ಎಂದು ಪಿತ್ರೋಡಾ ತಿಳಿಸಿದ್ದಾರೆ.
'ಭಾರತದ ಕಲ್ಪನೆಯು ಪ್ರಜಾಪ್ರಭುತ್ವ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದಲ್ಲಿ ಬೇರೂರಿತ್ತು. ಆದರೆ, ಈಗ 'ರಾಮ ನವಮಿ', 'ರಾಮ ಮಂದಿರ'ದಿಂದ ಸವಾಲನ್ನು ಎದುರಿಸುತ್ತಿದೆ. ಸದಾಕಾಲ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಭಾರತೀಯ ನಾಯಕನಂತೆ ಮಾತನಾಡದೆ, ಬಿಜೆಪಿಯವರಂತೆಯೇ ಮಾತನಾಡುತ್ತಾರೆ' ಎಂದು ಪಿತ್ರೋಡಾ ಪ್ರತಿಪಾದಿಸಿದ್ದಾರೆ.
ಈಚೆಗೆ ಅಮೆರಿಕದಲ್ಲಿ ಸಂಪತ್ತಿನ ಮರುಹಂಚಿಕೆ ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆ ಕುರಿತು ಸ್ಯಾಮ್ ಪಿತ್ರೋಡಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದರು.