ಇಸ್ಲಾಮಾಬಾದ್: ಬೆಲೆ ಏರಿಕೆ, ದುಬಾರಿ ವಿದ್ಯುತ್ ಬಿಲ್ ಹಾಗೂ ತೆರಿಗೆ ವಿರೋಧಿಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮುಷ್ಕರವು ಸೋಮವಾರವೂ ಮುಂದುವರಿದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸುವ ಕ್ರಮವಾಗಿ ಪಾಕಿಸ್ತಾನ ಸರ್ಕಾರವು ಒಟ್ಟು ₹2300 ಕೋಟಿ ಮೊತ್ತವನ್ನು ಈ ವಲಯಕ್ಕಾಗಿ ಹಂಚಿಕೆ ಮಾಡಿದೆ.
ಹೋರಾಟಗಾರರು ಮತ್ತು ಪೊಲೀಸರ ನಡುವೆ ಶನಿವಾರ ಇಲ್ಲಿ ಘರ್ಷಣೆ ನಡೆದಿದ್ದು, ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರು.
ಹಣದುಬ್ಬರ, ಬೆಲೆ ಏರಿಕೆ ವಿರೋಧಿಸಿ ಶುಕ್ರವಾರದಿಂದ ಪೂರ್ಣ ಬಂದ್ ಆಚರಿಸಲಾಗುತ್ತಿದ್ದು, ಜನಜೀವನ ಬಹುತೇಕ ಸ್ಥಗಿತವಾಗಿದೆ.
ಪರಿಸ್ಥಿತಿ ನಿಯಂತ್ರಿಸುವ ಕ್ರಮವಾಗಿ ಹೋರಾಟಗಾರರು ಹಾಗೂ ಸರ್ಕಾರದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯಿತು. ಇದರ ಹಿಂದೆಯೇ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಈ ವಲಯದಲ್ಲಿ ಪರಿಹಾರ ಕ್ರಮಗಳಿಗಾಗಿ ಹಣ ಬಿಡುಗಡೆ ಮಾಡಿದರು.
ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಡಿಮೆ ವೆಚ್ಚದಲ್ಲಿ ವಿದ್ಯುತ್ ಪೂರೈಸಬೇಕು ಹಾಗೂ ರಿಯಾಯಿತಿ ದರದಲ್ಲಿ ಗೋಧಿ ಹಿಟ್ಟು ಪೂರೈಸಬೇಕು ಎಂಬುದು ಪ್ರತಿಭಟನಕಾರರ ಪ್ರಮುಖ ಬೇಡಿಕೆಯಾಗಿದೆ.