ನವದೆಹಲಿ: ದೆಹಲಿ ಸಿಎಂ ಕೇಜ್ರಿವಾಲ್ ಗೆ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಲು ಮಧ್ಯಂತರ ಜಾಮೀನು ಮಂಜೂರು ಮಾಡಿರುವ ವಿಷಯದಲ್ಲಿ ಯಾವುದೇ ವಿನಾಯಿತಿ ತೋರಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ವೇಳೆ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿರುವುದರ ತೀರ್ಪಿಗೆ ವ್ಯಕ್ತವಾಗುತ್ತಿರುವ ಟೀಕೆ/ ವಿಮರ್ಶೆಗಳನ್ನು ಸ್ವಾಗತಿಸುತ್ತೇವೆ ಎಂದು ಕೋರ್ಟ್ ಹೇಳಿದೆ.
ನ್ಯಾ. ಸಂಜೀವ್ ಖನ್ನಾ, ದೀಪಂಕರ್ ದತ್ತಾ ಅವರಿದ್ದ ಪೀಠ ಜಾರಿ ನಿರ್ದೇಶನಾಲಯದ ಪ್ರತಿವಾದ ಹಾಗೂ ಹೇಳಿಕೆಗಳನ್ನು ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಿಗೆ ಮಧ್ಯಂತರ ಜಾಮೀನಿಗೆ ಸಂಬಂಧಿಸಿದ ಹೇಳಿಕೆಗಳ ಕುರಿತು ಕೇಜ್ರಿವಾಲ್ ಅವರ ವಕೀಲರ ಹೇಳಿಕೆಗಳನ್ನು ಮರುಪರಿಶೀಲಿಸಲು ಕೋರ್ಟ್ ನಿರಾಕರಿಸಿದೆ.
"ನಾವು ಯಾರಿಗೂ ಯಾವುದೇ ವಿನಾಯಿತಿ ನೀಡಿಲ್ಲ, ನಮ್ಮ ಆದೇಶದಲ್ಲಿ ಸಮರ್ಥನೆಗೆ ಬೇಕಾದ ಅಂಶಗಳನ್ನು ನಾವು ಹೊಂದಿರುವುದಾಗಿ ತಿಳಿಸಿದ್ದೇವೆ" ಎಂದು ನ್ಯಾಯ ಪೀಠ ಹೇಳಿದೆ. ತೀರ್ಪಿನ ವಿಮರ್ಶಾತ್ಮಕ ವಿಶ್ಲೇಷಣೆಗೆ "ಸ್ವಾಗತವಾಗಿದೆ" ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಚುನಾವಣಾ ಪ್ರಚಾರಗಳಲ್ಲಿ ಕೇಜ್ರಿವಾಲ್ ಮಾಡಿದ ಭಾಷಣಗಳಿಗೆ ಆಕ್ಷೇಪಿಸಿದರು, ಜನರು ಎಎಪಿಗೆ ಮತ ಹಾಕಿದರೆ ಅವರು ಜೂನ್ 2 ರಂದು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದರು. ಈ ಹೇಳಿಕೆಗೆ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದ್ದರು. "ಇದು ಅವರ ಊಹೆ. ನಾವು ಏನನ್ನೂ ಹೇಳಲು ಸಾಧ್ಯವಿಲ್ಲ" ಎಂದು ನ್ಯಾಯ ಪೀಠ ಮೆಹ್ತಾಗೆ ಹೇಳಿದೆ.
ಮೇ 10ರಂದು, ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ಜೂನ್ 2 ರಂದು ಶರಣಾಗುವಂತೆ ಕೋರ್ಟ್ ಕೇಳಿದೆ. ಮಾರ್ಚ್ 21 ರಂದು ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಲಾಗಿತ್ತು.