ಉಪ್ಪಳ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ತಾಲೂಕು ಲೈಬ್ರರಿ ಸಂಗಮವನ್ನು ಶನಿವಾರ ಪೈವಳಿಕೆ ಪಂಚಾಯತಿ ಕುಟುಂಬಶ್ರೀ ಸಭಾಂಗಣದಲ್ಲಿ ಆಯೋಜಿಸಲಾಯಿತು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಾ. ಪಿ. ಪ್ರಭಾಕರನ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲ ಕೆ. ಅಧ್ಯಕ್ಷತೆ ವಹಿಸಿದ್ದರು.
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹ್ಮದ್ ಹುಸೈನ್ ಪಿ.ಕೆ. ಕೌನ್ಸಿಲ್ ನ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ. ಕಮಲಾಕ್ಷ ಕೌನ್ಸಿಲ್ ನ ವಾರ್ಷಿಕ ಚಟುವಟಿಕಾ ವರದಿಯನ್ನು ಮಂಡಿಸಿದರು. ಕೌನ್ಸಿಲ್ ನ ಕಾರ್ಯಕಾರಿ ಸಮಿತಿ ಸದಸ್ಯ ಕಿಶೋರ್ ಕುಮಾರ್ ಪಿ., ವಾರ್ಷಿಕ ಆದಾಯ ಮತ್ತು ವೆಚ್ಚದ ಖಾತೆಗಳನ್ನು ಮತ್ತು ವಾರ್ಷಿಕ ಬಜೆಟ ನ್ನು ದಾಸಪ್ಪ ಶೆಟ್ಟಿ ಕೆ. ಮಂಡಿಸಿದರು. ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಗ್ರಂಥಾಲಯಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿದರು. ವಿವಿಧ ಕಾರ್ಯಸೂಚಿಗಳ ಅಂಗೀಕಾರದೊಂದಿಗೆ ಸಂಗಮ ಮುಕ್ತಾಯಗೊಂಡಿತು. ತಾಲೂಕು ಲೈಬ್ರರಿ ಕೌನ್ಸಿಲ್ ಜೊತೆ ಕಾರ್ಯದರ್ಶಿ ಶ್ರೀಕುಮಾರಿ ಕೆ. ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಬಷೀರ್ ಕೊಟ್ಟುಡೆಲ್ ವಂದಿಸಿದರು.