ಕೊಟ್ಟಾಯಂ: ಉದ್ದೇಶಿತ ಅಂಗಮಾಲಿ ಎರುಮೇಲಿ ಶಬರಿಪಥ ನಿರ್ಮಾಣಕ್ಕೆ ಅರ್ಧದಷ್ಟು ಮೊತ್ತವನ್ನು ಪಾವತಿಸಲು ಕೇರಳ ವಿಫಲವಾಗಿದೆ.
ಕಿಫ್ಬಿಯಿಂದ ಹಣ ಸಂದಾಯವಾಗುವ ನಿರೀಕ್ಷೆಯಲ್ಲಿ ಈ ಸಂಬಂಧ ಒಪ್ಪಿಗೆ ಪತ್ರವನ್ನು ಈ ಹಿಂದೆಯೇ ರೈಲ್ವೆ ಮಂಡಳಿಗೆ ನೀಡಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಿಫ್ಬಿ ಅರ್ಧಹಣ ನೀಡುವಲ್ಲಿ ವಿಫಲಗೊಂಡಿದೆ. ಸಾಲ ಮಿತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಕರಣದಲ್ಲಿ ಅಂತಿಮ ತೀರ್ಮಾನ ಆಗುವವರೆಗೆ ಈ ನಿಟ್ಟಿನಲ್ಲಿ ಹಣ ಪಾವತಿಯಾಗುವ ಭರವಸೆ ನೀಡಲಾಗದು ಎಂಬುದು ಕಿಫ್ಬಿ ನಿಲುವು. ಇದರ ಬೆನ್ನಲ್ಲೇ ಹಣ ಹೊಂದಿಸಲು ಇತರೆ ಮಾರ್ಗೋಪಾಯಗಳ ಕುರಿತು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರೂ ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲ. ಚರ್ಚೆಯಲ್ಲಿ ಮೂಡಿದ ಸಲಹೆಗಳನ್ನು ಮುಖ್ಯಮಂತ್ರಿಯವರಿಗೆ ನೀಡಲು ನಿರ್ಧರಿಸಿ ಸಭೆಯನ್ನು ಮುಂದೂಡಲಾಯಿತು.
ಕೇರಳ ರೈಲ್ ಡೆವಲಪ್‍ಮೆಂಟ್ ಕಾರ್ಪೋರೇಷನ್ ಸಿದ್ಧಪಡಿಸಿದ ಯೋಜನೆಗೆ 3,801 ಕೋಟಿ ರೂಪಾಯಿಗಳ ಪರಿಷ್ಕøತ ಅಂದಾಜಿಗೆ ದಕ್ಷಿಣ ರೈಲ್ವೆಯ ಹಣಕಾಸು ಇಲಾಖೆ ಅನುಮೋದನೆ ನೀಡಿತ್ತು. ರೈಲ್ವೇ ಮತ್ತು ಕೇರಳದ ನಡುವಿನ 50:50 ವೆಚ್ಚ ಹಂಚಿಕೆಯ ಆಧಾರದ ಮೇಲೆ ಯೋಜನೆಗಾಗಿ ರಿಟರ್ನ್ ದರವನ್ನು (ಆರ್.ಒ.ಆರ್.) ರೂಪಿಸಲಾಗಿದೆ. ಕೇರಳ ಸರ್ಕಾರವು ಈ ಹಿಂದೆ ಒಪ್ಪಿಕೊಂಡಂತೆ ವೆಚ್ಚ ಹಂಚಿಕೆಯಿಂದ ಯಾವುದೇ ಕೊರತೆಯಿದ್ದರೆ, ರೈಲ್ವೆ ಮಂಡಳಿಯು ಯೋಜನೆಯನ್ನು ಮಂಜೂರು ಮಾಡಲು ಸಾಧ್ಯವಿಲ್ಲ.
1997-98ರ ರೈಲ್ವೆ ಬಜೆಟ್‍ನಲ್ಲಿ 550 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಜೂರಾದ ಶಬರಿಮಲೆ ಬಳಿಯ ಅಂಗಮಾಲಿಯಿಂದ ಎರುಮೇಲಿವರೆಗೆ 111 ಕಿ.ಮೀ ಮಾರ್ಗವನ್ನು ನಿರ್ಮಿಸಲು ಯೋಜನೆ ಕಲ್ಪಿಸಲಾಗಿತ್ತು. ನಂತರ, 264 ಕೋಟಿ ರೂಪಾಯಿ ವೆಚ್ಚದಲ್ಲಿ, ಎಂಟು ಕಿಲೋಮೀಟರ್ ಉದ್ದದ ರೈಲುಮಾರ್ಗ, ಪೆರಿಯಾರ್ ಅಡ್ಡಲಾಗಿ ಸೇತುವೆ ಮತ್ತು ಕಾಲಡಿಯಲ್ಲಿ ನಿಲ್ದಾಣವನ್ನು ಯೋಜನೆಯ ಭಾಗವಾಗಿ ನಿರ್ಮಿಸಲಾಯಿತು.
ಯೋಜನೆಗೆ ಭೂಮಿ ನೀಡಲು ಸಿದ್ಧರಿರುವ ಬಹುತೇಕ ಭೂಮಾಲೀಕರು ಭೂಮಿಗೆ ಸರ್ವೇ ನಡೆಸಿದ ನಂತರ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಭೂಮಿಯನ್ನು ಅಡಮಾನ ಇಡಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.