ಪೊಂಚ್: ಜಮ್ಮು- ಕಾಶ್ಮೀರದ ಪೊಂಚ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆ (ಐಎಎಫ್) ವಾಹನಗಳ ಮೇಲೆ ದಾಳಿ ನಡೆಸಿದ ಇಬ್ಬರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಭದ್ರತಾ ಪಡೆ ಸೋಮವಾರ ಬಿಡುಗಡೆ ಮಾಡಿದೆ. ಉಗ್ರರ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾದರೆ, ಮತ್ತಿತರ ನಾಲ್ವರು ಗಾಯಗೊಂಡಿದ್ದರು. ಇಬ್ಬರು ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನವನ್ನೂ ಸೇನೆ ಘೋಷಿಸಿದೆ.
ದಾಳಿಯಲ್ಲಿ ಐವರು ಐಎಎಫ್ ಯೋಧರಿಗೆ ಗಾಯಗಳಾಗಿವೆ. ನಂತರ, ಅವರಲ್ಲಿ ಒಬ್ಬರಾದ ಕಾರ್ಪೋರಲ್ ವಿಕ್ಕಿ ಪಹಡೆ ಎಂಬವರು ಉಧಮ್‌ಪುರದ ಸೇನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಪೂಂಚ್‌ನ ದನ್ನಾ ಟಾಪ್, ಶಹಸ್ತಾರ್, ಶೀಂದ್ರಾ ಮತ್ತು ಸನೈ ಟಾಪ್ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಸುಮಾರು 20 ವ್ಯಕ್ತಿಗಳನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಒಸಿ 16 ಕಾರ್ಪ್ಸ್ ಮತ್ತು ಜಮ್ಮು ಎಡಿಜಿಪಿ ಸೇರಿದಂತೆ ಪೊಲೀಸ್ ಮತ್ತು ಸೇನೆಯ ಉನ್ನತ ಅಧಿಕಾರಿಗಳು ನಿನ್ನೆ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸುರನ್‌ಕೋಟೆ ಪ್ರದೇಶದ ಶೈಸ್ತರ್ ಸನಾಯ್ ಬಳಿ ಐಎಎಫ್ ಬೆಂಗಾವಲು ಪಡೆಯ ಮೇಲೆ ಶನಿವಾರ ಮೂವರು ಉಗ್ರರ ಗುಂಪು ಹಠಾತ್ ದಾಳಿ ನಡೆಸಿದ್ದವು. ಉಗ್ರರ ಪತ್ತೆಗೆ ನೆರವಾಗುವ ವಿಶ್ವಾಸಾರ್ಹ ಮಾಹಿತಿಯನ್ನು ನೀಡುವವರಿಗೆ ಬಹುಮಾನ ನೀಡಲಾಗುವುದು ಮತ್ತು ಅವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.