ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಸ್ಕೂಲ್ ಪ್ರೊಟೆಕ್ಷನ್ ಗ್ರೂಪ್(ಎಸ್‍ಪಿಜಿ)ಸಮಿತಿ ರಚನಾ ಸಭೆ ಬದಿಯಡ್ಕ ಠಾಣೆ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಶಾಲೆಯಲ್ಲಿ ಜರುಗಿತು. ಬದಿಯಡ್ಕ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಸುಧೀರ್ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿ, ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಬಗ್ಗೆ ಸರ್ಕಾರದ ವಿಶೇಷ ನಿರ್ದೇಶನದನ್ವಯ ಪ್ರತಿ ಶಾಲೆಯಲ್ಲಿ ಎಸ್‍ಪಿಜಿ ಸಮಿತಿ ರಚಿಸಲಾಗುತ್ತಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು, ವಿದ್ಯಾರ್ಥಿಗಳು ತಂಬಾಕು, ಮಾದಕ ವಸ್ತುಗಳಿಗೆ ದಾಸರಾಗುವುದನ್ನು ತಪ್ಪಿಸುವುದರ ಜತೆಗೆ ಅವರಲ್ಲಿ ಉತ್ತಮ ಚಿಂತನೆಗಳನ್ನು ಮೂಡಿಸುವ ನಿಟ್ಟಿನಲ್ಲಿ ಸಮಿತಿ ಕಾರ್ಯಾಚರಿಸಲಿದೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಸಮಿತಿ ಅಧ್ಯಕ್ಷರಾಗಿದ್ದು, ಆಯಾ ವಾರ್ಡು ಸದಸ್ಯರು, ಆಯಾ ವ್ಯಾಪ್ತಿಯ ಠಾಣಾಧಿಕಾರಿ, ಶಾಲಾ ಮುಖ್ಯ ಶಿಕ್ಷಕರು, ಆಟೋ ಚಾಲಕರು, ವ್ಯಾಪಾರಿಗಳು ಪದಾಧಿಕಾರಿಗಳಾಗಿರುವರು ಎಂದು ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಠಾಣೆ ಎಎಸ್‍ಐ ಹಾಗೂ ಚೈಲ್ಡ್ ವೆಲ್ಫೇರ್ ಅಧಿಕಾರಿ ಡೆನ್ನಿಸನ್, ಸಹಾಯಕ ಅಧಿಕಾರಿ ಶ್ರುತಿ, ಜನಮೈತ್ರಿ ಪೊಲೀಸ್ ಅಧಿಕಾರಿ ದಿನೇಶ್, ಶಾಲಾ ಮುಖ್ಯ ಶಿಕ್ಷಕ ಎನ್. ಕೇಶವ ಪ್ರಕಾಶ್, ಆಡಳಿತ ಮಂಡಳಿಯ ಡಾ. ಪ್ರಸನ್ನಮಿತ್ರ, ಮಂಡಳಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಹಿರಿಯ ಶಿಕ್ಷಕ ವೇಣುಗೋಪಾಲ್, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.