ವಾಷಿಂಗ್ಟನ್: ಇರಾನ್‌ನೊಂದಿಗೆ ವ್ಯಾಪಾರ ಸಂಬಂಧ ಹೊಂದುವ ಯಾವುದೇ ದೇಶವಾದರೂ ದಿಗ್ಬಂಧನ ಎದುರಿಸಬೇಕಾದಿತು ಎಂದು ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.
ಇರಾನ್‌ನ ಚಾಬಹಾರ್ ಬಂದರು ಅಭಿವೃದ್ಧಿಗೆ ಭಾರತ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಅಮೆರಿಕ ಎಚ್ಚರಿಕೆ ನೀಡಿದೆ.
'ಚಾಬಹಾರ್ ಬಂದರು ಸಂಬಂಧ ಭಾರತ ಹಾಗೂ ಇರಾನ್ ಒಪ್ಪಂದ ಮಾಡಿಕೊಂಡಿರುವ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಚಾಬಹಾರ್ ಬಂದರು ಮತ್ತು ಇರಾನ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ತನ್ನದೇ ಆದ ವಿದೇಶಾಂಗ ನೀತಿ ಗುರಿಗಳ ಬಗ್ಗೆ ಮಾತನಾಡಲು ಭಾರತ ಸರ್ಕಾರಕ್ಕೆ ಅವಕಾಶ ನೀಡುತ್ತೇನೆ' ಎಂದು ರಾಜ್ಯ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.
'ಇದು ಅಮೆರಿಕಕ್ಕೆ ಸಂಬಂಧಿಸಿದ ವಿಷಯ. ಇರಾನ್ ಮೇಲೆ ಅಮೆರಿಕದ ದಿಗ್ಬಂಧನ ಇದೆ. ಅದನ್ನು ನಾವು ಮುಂದುವರಿಸಲಿದ್ದೇವೆ' ಎಂದು ಚಾಬಹಾರ್ ಬಂದರು ಒಪ್ಪಂದ ಸಂಬಂಧ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
'ನಾವು ಹಲವಾರು ಬಾರಿ ಇದನ್ನು ಹೇಳುವುದನ್ನು ನೀವು ಕೇಳಿದ್ದೀರಿ. ಯಾರಾದರೂ ಇರಾನ್‌ನೊಂದಿಗೆ ವ್ಯಾಪಾರ ವ್ಯವಹಾರಗಳನ್ನು ಇಟ್ಟುಕೊಂಡರೆ, ಅವರು ಸಂಭಾವ್ಯ ಅಪಾಯ ಮತ್ತು ನಿರ್ಬಂಧಗಳ ಬಗ್ಗೆ ತಿಳಿದಿರಬೇಕು' ಎಂದು ಪಟೇಲ್ ಹೇಳಿದರು.
ಕೇಂದ್ರ ಏಷ್ಯಾದಲ್ಲಿ ತನ್ನ ವ್ಯಾಪಾರ ಸಂಬಂಧ ವೃದ್ಧಿಸಿಕೊಳ್ಳಲು ಭಾರತವು ಸೋಮವಾರ ಚಾಬಹಾರ್ ಬಂದರು ಅಭಿವೃದ್ಧಿಗೆ 10 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು.