ಕಾಸರಗೋಡು: ಬಂಬ್ರಾಣ ಅಂಡಿತ್ತಡ್ಕದಲ್ಲಿ ತಂಡವೊಂದು ಹಲ್ಲೆ ನಡೆಸಿದ ಪರಿಣಾಮ ವ್ಯಾಪಾರಿಯಾದ ತಂದೆ ಹಾಗೂ ಪುತ್ರ ಗಾಯಗೊಂಡಿದ್ದಾರೆ. ಅಂಡಿತ್ತಡ್ಕ ನಿವಾಸಿ, ಗೂಡಂಗಡಿ ವ್ಯಾಪಾರಿ ರಮೇಶ್ ಹಾಗೂ ಇವರ ಪುತ್ರ ರಜಿತ್ ಗಾಯಾಳುಗಳು. ಇವರು ಕುಂಬಳೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು. ಪ್ರಕರಣಕ್ಕೆ ಸಂಬಂಧಿಸಿ ಬಂಬ್ರಾಣ ಬತ್ತೇರಿ ನಿವಾಸಿ, ಸಹೋದರರಾದ ಹರೀಶ್, ಯೋಗೀಶ್ ಹಾಗೂ ಸತೀಶ್ ಎಂಬವರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಅಂಡಿತ್ತಡ್ಕದಲ್ಲಿ ಭಾನುವಾರ ಹಗಲು ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾಟದಲ್ಲಿ ರಮೇಶ್ ಅವರು ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಸಂದರ್ಭ ಇಲ್ಲಿಗೆ ಆಗಮಿಸಿದ ತಂಡ ಕ್ಷುಲ್ಲಕ ಕಾರಣಕ್ಕೆ ರಮೇಶ್ ಅವರೊಂದಿಗೆ ವಾಗ್ವಾದ ನಡೆಸಿ, ಹಲ್ಲೆಗೈದಿದೆ. ಇದನ್ನು ತಡೆಯಲು ಬಂದ ಪುತ್ರ ರಜಿತ್ ಅವರ ಮೇಲೂ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.