ಮಂಜೇಶ್ವರ: ನಾವು ಅಧಿಕಾರಕ್ಕೆ ಬಂದರೆ ತ್ಯಾಜ್ಯ ವಿಲೇವಾರಿ ನಡೆಸಿ ಮಂಜೇಶ್ವರವನ್ನು ದುರ್ಗಂಧ ಮುಕ್ತ ಗೊಳಿಸುತ್ತೇವೆಂಬ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಜನಪ್ರತಿನಿಧಿಗಳ ಕಾಲಾವಧಿ ಮುಗಿಯಲು ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿರುವಾಗ ಮಂಜೇಶ್ವರದ ಎಲ್ಲಡೆ ತ್ಯಾಜ್ಯಗಳು ತುಂಬಿ ವಿಲೇವಾರಿಗೆ ಕ್ರಮ ಇಲ್ಲದೆ ತ್ಯಾಜ್ಯಗಳು ತುಂಬಿ ಗುಬ್ಬೆದ್ದು ನಾರುತ್ತಿದ್ದು ಜನರಿಗೆ ಸಾಂಕ್ರಾಮಿಕ ರೋಗದ ಭೀತಿಯಿಂದ ನಿದ್ದೆ ಇಲ್ಲದಾಗಿರುವುದಾಗಿ ಊರವರು ಹೇಳುತಿದ್ದಾರೆ.
ತ್ಯಾಜ್ಯ ವಿಲೇವಾರಿಯಲ್ಲಿ ಪಂಚಾಯತು ಅಧಿಕೃತರು ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರು ನಿರಂತರವಾಗಿ ಆರೋಪಿಸುತ್ತಲೇ ಇದ್ದಾರೆ. ಆದರೆ, ಸಮಸ್ಯೆಗೆ ಇಂದಿಗೂ ಪರಿಹಾರ ದೊರೆಯುತ್ತಿಲ್ಲವೆಂಬುದು ವಿಪರ್ಯಾಸವಾಗಿದೆ. ಮೊದಲು ಕರ್ನಾಟಕದಿಂದ ಆಗಮಿಸುತಿದ್ದ ಲಾರಿಯೊಂದು ಗುತ್ತಿಗೆ ಆಧಾರದಲ್ಲಿ ಮಂಜೇಶ್ವರದ ತ್ಯಾಜ್ಯಗಳನ್ನು ಕೊಂಡೊಯ್ಯುತಿತ್ತು. ಆದರೆ ಈ ಸಲ ಅದು ಕೂಡಾ ಇಲ್ಲದಾಗಿರುವುದಾಗಿ ಊರವರು ಹೇಳುತಿದ್ದಾರೆ.
ಕುಂಜತ್ತೂರು - ಪದವು ರಸ್ತೆ, ಹೈಗ್ಲೋದಿ - ಪಾವೂರು ರಸ್ತೆ, ಮಾಲಿಂಗೇಶ್ವರ - ಕುಂಜತ್ತೂರು ರಸ್ತೆ ಹಾಗೂ ಮಂಜೇಶ್ವರದ ಹಲವೆಡೆಯ ಸಾರ್ವಜನಿಕ ಸ್ಥಳಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ತ್ಯಾಜ್ಯಗಳ ರಾಶಿಗಳು ಗುಬ್ಬೆದ್ದು ನಾರುತಿದ್ದು, ಪ್ರದೇಶವೇ ದುರ್ಗಂಧಮಯವಾಗಿದೆ.
ಮತ್ತೊಂದು ಗಂಭೀರ ವಿಷಯದೆಂದರೆ ಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗುಜರಿ ಅಂಗಡಿಗಳಲ್ಲಿ ಹಾಗೂ ಇತರ ಕೆಲವು ಅಂಗಡಿಗಳ ಮುಂಬಾಗದ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ವಾಯುಮಾಲಿನ್ಯ ಉಂಟಾಗಿ, ಜನರ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದರಿಂದ ಅಸ್ತಮ, ಶ್ವಾಸಕೋಶ ಸಮಸ್ಯೆ, ಕಣ್ಣಿನ ಉರಿ, ಗಂಟಲು ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಕ್ಯಾನ್ಸರ್ ಗೂ ಕಾರಣವಾಗುತ್ತಿದೆ. ಈ ವಿಷಯದಲ್ಲೂ ಪಂಚಾಯತಿ ಅಧಿಕಾರಿಗಳ ಮೌನ ಸ್ಥಳೀಯರ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.
ಇತ್ತೀಚೆಗೆ ಮಂಜೇಶ್ವರದ ಶಾಲೆಯೊಂದರಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲೆಯಿಂದ ಆಗಮಿಸಿದ ಶುಚಿತ್ವ ಮಿಶನ್ ಅಧಿಕಾರಿಗಳು ಹಾಗೂ ಇತರ ಉನ್ನತ ಅಧಿಕಾರಿಗಳು ಆಗಮಿಸಿ ಮಂಜೇಶ್ವರವನ್ನು ತ್ಯಾಜ್ಯ ಮುಕ್ತಗೊಳಿಸುವುದಾಗಿ ಸಭೆ ನಡೆಸಿ ಪಣತೊಟ್ಟಿದ್ದರೂ ಅದು ಕೂಡಾ ವಿಫಲಗೊಂಡಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ.
ಇನ್ನು ಮಳೆಗಾಲ ಆರಂಭಗೊಳ್ಳಲು ಕೆಲವೇ ವಾರಗಳಿದ್ದು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಇದೇ ಪರಿಸರದಿಂದ ಸಾಗಬೇಕಾಗಿದೆ. ಸಂಬಂಧಪಟ್ಟವರು ಇನ್ನಾದರೂ ಕೂಡಲೇ ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಭಿಮತ::
ಕೇವಲ ಸಭೆ ಸಮಾರಂಭಗಳಿಗೆ ಮಾತ್ರ ಸೀಮಿತವಾಗಿರುವ ತ್ಯಾಜ್ಯ ವಿಲೀವಾರಿಯ ಹೇಳಿಕೆ ಹಾಸ್ಯಾಸ್ಪದವಾಗಿದೆ. ಭರವಸೆಗಳನ್ನು ನೀಡಿ ಅಧಿಕಾರದ ಚುಕ್ಕಾಣಿ ಹಿಡಿದವರು ಇದೀಗ ನಾಡಿಗೆ ದುರ್ಗಂಧ ನೀಡಿ ನಿರ್ಗಮಿಸುವ ಕಾಲ ಸನ್ನಿಹಿತವಾಗಿದೆ.
-ಅಬ್ದುಲ್ ಜಬ್ಬಾರ್. ಮಂಜೇಶ್ವರ
(ಸಾಮಾಜಿಕ ಕಾರ್ಯಕರ್ತರು)