ಜಾಮ್‌ನಗರ :ಗುಜರಾತ್‌ನ ಜಾಮ್‌ನಗರದಲ್ಲಿರುವ ವಿಮಾನ ನಿಲ್ದಾಣವನ್ನು ಉದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬದ ಸಮಾರಂಭದ ಸಲುವಾಗಿ 10 ದಿನಗಳ ಕಾಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆದರೆ, ಆ ಪ್ರಕ್ರಿಯೆ ನಡೆಸಲು ಪಾಲಿಸಲಾಗಿರುವ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಭಾರತೀಯ ವಾಯುಸೇನೆಯ ಕಾರ್ಯಾಚರಣೆ ನೆಲೆಯಾಗಿದ್ದ ಜಾಮ್‌ನಗರದ ದೇಶೀಯ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ವಹಿಸುವುದಕ್ಕಾಗಿ ಫೆಬ್ರುವರಿ 25ರಿಂದ ಮಾರ್ಚ್ 5ರ ವರೆಗೆ ಮೇಲ್ದರ್ಜೆಗೇರಿಸಲಾಗಿತ್ತು. ಸರಾಸರಿ 5 ವಿಮಾನಗಳ ಸಂಚಾರ ಇರುವ ಇಲ್ಲಿ, ಮಾರ್ಚ್ 1ರಂದು ಬರೋಬ್ಬರಿ 70 ವಿಮಾನಗಳು ಹಾರಾಟ ನಡೆಸಿದ್ದವು.
ಮುಕೇಶ್ ಅಂಬಾನಿ ಅವರ ಮಗನ ವಿವಾಹ ಪೂರ್ವ ಸಮಾರಂಭಕ್ಕೆ ಅತಿಥಿಗಳು ಆಗಮಿಸಲು ನೆರವಾಗುವುದಕ್ಕಾಗಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ. 'ಯಾವ ಮಾನದಂಡದ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಬೇಕು' ಎಂದು ಕೋರಿ ಟಿ.ನರಸಿಂಹ ಮೂರ್ತಿ ಎಂಬವರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಡಿಜಿಸಿಎಯನ್ನು ಪ್ರಶ್ನಿಸಿದ್ದರು.
'ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಬಳಿ ಇಲ್ಲ' ಎಂದು ಡಿಜಿಸಿಎ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನರಸಿಂಹ ಮೂರ್ತಿ, 'ಡಿಜಿಸಿಎ ಪ್ರತಿಕ್ರಿಯೆಯು ತೀವ್ರ ಕಳವಳಕಾರಿಯಾಗಿದೆ. ಪಾಕಿಸ್ತಾನ ಗಡಿ ಸಮೀಪದಲ್ಲಿರುವ ಹಾಗೂ ಸೇನೆಯ ವಾಯು ನೆಲೆಯಾಗಿದ್ದ ವಿಮಾನ ನಿಲ್ದಾಣಕ್ಕೆ ಹೇಗೆ ಇಂತಹ ಸ್ಥಾನಮಾನ ನೀಡಲಾಗಿದೆ ಎಂಬುದನ್ನು ತಿಳಿಯುವ ಹಕ್ಕು ಪ್ರತಿಯೊಬ್ಬ ನಾಗರಿಕರಿಗೂ ಇದೆ. ದೇಶದ ಎಲ್ಲ ಜನರೂ ತಮ್ಮ ಕುಟುಂಬಗಳ ವ್ಯವಹಾರಗಳಿಗೂ ಇದೇ ರೀತಿಯ ವಿಶೇಷ ಅನುಮತಿಗಳನ್ನು ಪಡೆಯಲು ಸಾಧ್ಯವೇ? ಡಿಜಿಸಿಎ ನೀಡಿರುವ ಉತ್ತರದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ' ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕಾನೂನು ಅಥವಾ ನಿಯಮಗಳ ಕುರಿತಾಗಿ ಮಾತ್ರವಲ್ಲದೆ, ಸಂಬಂಧಪಟ್ಟ ವಿವಿಧ ಇಲಾಖೆಗಳು ನೀಡಿದ ನಿರಾಕ್ಷೇಪಣಾ ಪ್ರಮಾಣಪತ್ರದ (ಎನ್‌ಒಸಿ) ನಕಲು ಪ್ರತಿ ಹಾಗೂ ವಿಮಾನ ನಿಲ್ದಾಣದ ನವೀಕರಣಕ್ಕೆ ತಗುಲಿದ ವೆಚ್ಚದ ಕುರಿತ ಮಾಹಿತಿಯನ್ನೂ ಮೂರ್ತಿ ಅವರು ಕೇಳಿದ್ದರು.