ತಿರುವನಂತಪುರಂ: ಮೇಯರ್ ಆರ್ಯ ರಾಜೇಂದ್ರನ್ ಹಾಗೂ ಅವರ ಕುಟುಂಬದವರ ಕಾರನ್ನು ಕೆಎಸ್ ಆರ್ ಟಿಸಿ ಬಸ್ ಎದುರು ನಿಲ್ಲಿಸಿ ಪ್ರಯಾಣಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಂಟೋನ್ಮೆಂಟ್ ಪೋಲೀಸರಿಗೆ ನ್ಯಾಯಾಲಯ ಸೂಚಿಸಿದೆ.
ವಕೀಲ ಬೈಜು ನೋಯೆಲ್ ಅವರ ಅರ್ಜಿಯ ಮೇರೆಗೆ ತಿರುವನಂತಪುರಂ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ನಿರ್ದೇಶನ ನೀಡಿದೆ.
ಸರ್ಕಾರಿ ನೌಕರನ ಅಧಿಕೃತ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ ಎಂಬುದು ವಕೀಲರ ದೂರು.
ಏತನ್ಮಧ್ಯೆ, ಮೇಯರ್, ಅವರ ಪತಿ ಶಾಸಕ ಸಚಿನ್‍ದೇವ್ ಮತ್ತು ಕುಟುಂಬಸ್ಥರು ಬಸ್ ತಡೆದ ಘಟನೆಯಲ್ಲಿ ಚಾಲಕ ಯದು ಕೂಡ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಧಿಕೃತ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದ್ದು, ಸಚಿನ್‍ದೇವ್ ಬಸ್‍ನಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.
ತಿರುವನಂತಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದೂರನ್ನು ಸ್ವೀಕರಿಸಿ ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿತು. ಯದು ದೂರಿನ ಮೇಲೆ ಪೋಲೀಸರು ಕೇಸು ದಾಖಲಿಸಲು ಸಿದ್ಧರಿಲ್ಲದ ಕಾರಣ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೇ ವೇಳೆ ಬಸ್ ಹತ್ತಿದ ಶಾಸಕರನ್ನು ನೋಡಿಲ್ಲ ಎಂದು ಬಸ್ ಕಂಡಕ್ಟರ್ ಸುಬಿನ್ ನೀಡಿರುವ ಹೇಳಿಕೆ ಸುಳ್ಳು ಎಂದು ಯದು ಆರೋಪಿಸಿದ್ದಾರೆ.
ಘಟನೆ ಸಂಭವಿಸಿದ ನಂತರ, ಕಂಡಕ್ಟರ್ ಸುಬಿನ್ ಅವರು ಡಿವೈಎಫ್ ಐ ಅಖಿಲ ಭಾರತ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಎಎ ರಹೀಮ್ ಅವರನ್ನು ಪೋನ್‍ನಲ್ಲಿ ಕರೆದು ತಿಳಿಸಿದ್ದರು.