ಮುಳ್ಳೇರಿಯ: ಇರಿಯಣ್ಣಿಯಲ್ಲಿ ಮತ್ತೆ ಆನೆಗಳ ದಾಳಿಯಿಂದ ಭಾರೀ ಕೃಷಿನಾಶ ಉಂಟಾಗಿದೆ. ಇರಿಯಣ್ಣಿ ಕೂಡಲದಲ್ಲಿ ಆನೆಗಳ ಒಂದು ಗುಂಪು ಕೂಡಲ ನಿವಾಸಿ ರಾಜನ್, ಶಶಿಧರನ್ ಎಂಬುವವರಿಗೆ ಸೇರಿದ ಅಡಕೆ, ಬಾಳೆ ಗಿಡಗಳನ್ನು ವ್ಯಾಪಕವಾಗಿ ಹಾನಿಗೊಳಿಸಿರುವುದಲ್ಲದೆ, ತೋಟದಲ್ಲಿ ಅಳವಡಿಸಲಾದ ನೀರು ವಿತರಣೆಗಿರುವ ಪೈಪುಗಳನ್ನೂ ಹಾಳುಗೆಡಹಿದೆ. ತೋಟಕ್ಕೆ ಅಡಕೆ ಮರದಿಂದ ನಿರ್ಮಿಸಲಾದ ಬೇಲಿಯನ್ನೂ ತುಳಿದು ನಾಶಗೊಳಿಸಿದೆ.
ಕಾಳಿಪಳ್ಳಂ ನಿವಾಸಿ ಪ್ರಶಾಂತ್ ಎಂಬವರ ಅಡಕೆ ತೋಟವನ್ನೂ ಹಾನಿಗೊಳಿಸಿದೆ. ಕಳೆದ ನಾಲ್ಕು ದಿವಸಗಳಿಂದ ಆನೆಗಳ ಗುಂಪು ಈ ಪ್ರದೇಶದಲ್ಲಿ ವಯಾಫಕವಾಘಿ ಕೃಷಿನಾಶಗೊಳಿಸಿದೆ. ನೀರು ಹಾಗೂ ಆಹಾರ ಅರಸಿಕೊಂಡು ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಡಿನತ್ತ ಬರುತ್ತಿವೆ ಎಂಬುದಾಗಿ ಅರಣ್ಯಾಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ ಬೇಸಿಗೆ ಮಳೆಯಿಂದ ಪಯಸ್ವಿನಿ ಹೊಳೆಯಲ್ಲಿ ನೀರು ಹರಿಯಲಾರಂಭಿಸಿದ್ದು, ನೀರಿನ ಲಭ್ಯತೆ ಇದ್ದರೂ ಆನೆಗಳು ನಾಡಿಗಿಳಿದು ವ್ಯಾಪಕ ಕೃಷಿಹಾನಿ ನಡೆಸುತ್ತಿದೆ. ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಥಳೀಯರು ಆಗ್ರಹಿಸಿದ್ದಾರೆ.