HEALTH TIPS

ಮೊಟ್ಟ ಮೊದಲ ದೋಸೆ ಯಾವಾಗ ತಯಾರಿಸಲಾಯಿತು? ಇಲ್ಲಿದೆ ಎಲ್ಲರ ನೆಚ್ಚಿನ ತಿಂಡಿಯ ರೋಚಕ ಇತಿಹಾಸ!

          ಎಲ್ಲರ ನೆಚ್ಚಿನ ಆಹಾರ ದೋಸೆ ಎಂಬುದರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಚಟ್ನಿ, ಸಾಂಬಾರ್​ ಹಾಗೂ ಪಲ್ಯದ ಜತೆಗೆ ದೋಸೆ ಕಾಂಬಿನೇಷನ್​ ಸಖತ್​ ಟೇಸ್ಟಿಯಾಗಿರುತ್ತದೆ. ಸವಿದವರಿಗೆ ಮಾತ್ರ ಗೊತ್ತು ದೋಸೆಯ ರುಚಿ. ಹೀಗಾಗಿಯೇ ದೋಸೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ.

             ದೋಸೆಯಲ್ಲಿ ತುಂಬಾ ವೆರೈಟಿಗಳಿವೆ. ಮಸಾಲೆ ದೋಸೆ, ಸೆಟ್​ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ, ಬೆಣ್ಣೆ ದೋಸೆ ಹಾಗೂ ಮೊಟ್ಟೆ ದೋಸೆ ಹೀಗೆ ನಾನಾ ಬಗೆಯ ದೋಸೆ ಖಾದ್ಯಗಳಿವೆ. ದಿನನಿತ್ಯವೂ ದೋಸೆ ಸವಿಯುವವರಿದ್ದಾರೆ. ಈ ದೋಸೆಯನ್ನು ಮೊಟ್ಟ ಮೊದಲ ಬಾರಿಗೆ ಯಾವಾಗ ಮಾಡಲಾಯಿತು? ಎಂದು ಕೇಳಿದರೆ, ಬಹುತೇಕರು ಗೊತ್ತಿಲ್ಲ ಎಂದು ಹೇಳುತ್ತಾರೆ. ಆದರೆ, ನಾವೀಗ ದೋಸೆ ಇತಿಹಾಸವನ್ನು ನಿಮಗೆ ತಿಳಿಸುತ್ತೇವೆ.

              ಅಂದಹಾಗೆ ಪ್ರತಿಯೊಬ್ಬರು ದೋಸೆಯನ್ನು ಸವಿಯಲು ಬಯಸುತ್ತಾರೆ. ಕೆಲವೊಮ್ಮೆ ತ್ವರಿತ ಉಪಹಾರಕ್ಕಾಗಿ ನಾವೇ ತಯಾರಿಸುತ್ತೇವೆ. ಬೆಳಗಿನ ಉಪಹಾರಕ್ಕೆ ಮಾತ್ರವಲ್ಲ, ರಾತ್ರಿಯ ಊಟಕ್ಕೂ ಅದನ್ನು ಸೇವಿಸುತ್ತೇವೆ. ಎಲ್ಲರ ಬಾಯಲ್ಲಿ ನೀರೂರಿಸುವ ಭಕ್ಷ್ಯವು ಯಾವಾಗಲೂ ನಮ್ಮ ಮನಸ್ಸು ಮತ್ತು ಹೊಟ್ಟೆಯನ್ನು ತೃಪ್ತಿಪಡಿಸುತ್ತದೆ.

ದೋಸೆ ಹಿನ್ನೆಲೆ ಏನು?
            ದೋಸೆಯನ್ನು ದೋಸೈ, ದೋಸೆ, ದೋಸಾ ಎಂಬಿತ್ಯಾದಿ ಪದಗಳಿಂದ ಕರೆಯುತ್ತಾರೆ. ದಕ್ಷಿಣ ಭಾರತದ ಈ ಸವಿಯಾದ ತಿಂಡಿಯು ತುಂಬಾ ಗೊಂದಲಮಯವಾದ ಇತಿಹಾಸವನ್ನು ಹೊಂದಿದೆ. ದೋಸೆಯ ಮೂಲ ನಮ್ಮದು ಎಂದು ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳು ಹಕ್ಕು ಸಾಧಿಸುತ್ತಿವೆ. ಇಬ್ಬರ ವಾದ ಏನು ಎಂಬುದನ್ನು ನಾವೀಗ ತಿಳಿಯೋಣ.

              ಆಹಾರ ಇತಿಹಾಸಕಾರ ಕೆ.ಟಿ ಅಚಾಯ ಅವರ ಪ್ರಕಾರ ದೋಸೆಯು 1ನೇ ಶತಮಾನದಿಂದ ತಮಿಳು ಸಂಸ್ಕೃತಿಯ ಭಾಗವಾಗಿದೆ ಎಂದು ಹೇಳುತ್ತಾರೆ. ತಮಿಳುನಾಡು, ಕೇರಳ, ಪುದುಚೇರಿ, ಲಕ್ಷದ್ವೀಪ ದ್ವೀಪಗಳು ಮತ್ತು ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳನ್ನು ಒಳಗೊಂಡಿರುವ ಪ್ರಾಚೀನ ತಮಿಳು ಪ್ರಾಂತ್ಯದ ಗಡಿಯಲ್ಲಿ ದೋಸೆ ಹುಟ್ಟಿಕೊಂಡಿದೆ ಎಂದು ಆಚಾರ್ಯ  ಅವರು ತಮ್ಮ 'ನಮ್ಮ ಆಹಾರದ ಕಥೆ' ಪುಸ್ತಕದಲ್ಲಿ ಬರೆದಿದ್ದಾರೆ.

              ಮತ್ತೊಂದೆಡೆ, ಪಿ. ತಂಕಪ್ಪನ್ ನಾಯರ್ ಹೆಸರಿನ ಇನ್ನೊಬ್ಬ ಆಹಾರ ಇತಿಹಾಸಕಾರ ಇದನ್ನು ಕರ್ನಾಟಕದ ಉಡುಪಿ ಪಟ್ಟಣದಲ್ಲಿ ಮೊದಲು ಮಾಡಲಾಯಿತು ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಭಾರತದಾದ್ಯಂತ ಅನೇಕ ದೋಸೆ ರೆಸ್ಟೋರೆಂಟ್‌ಗಳು ತಮ್ಮ ಹೆಸರಿನಲ್ಲಿ 'ಉಡುಪಿ'ಯನ್ನು ಹೊಂದಿವೆ ಎಂಬ ವಾದವೂ ಇದೆ.

                ಇನ್ನೂ ಸುಮಾರು 11ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಚಾಲುಕ್ಯ ರಾಜವಂಶದ ರಾಜ ಸೋಮೇಶ್ವರ III ರವರು ತಮ್ಮ ಪುಸ್ತಕ 'ಮಾನಸೋಲ್ಲಾಸ'ದಲ್ಲಿ ದೋಸೆಯ ಪಾಕವಿಧಾನವನ್ನು ಬರೆದಿರುವುದು ಆ ಕಾಲದಲ್ಲೇ ದೋಸೆಯ ಖ್ಯಾತಿಗೆ ಹಿಡಿದ ಕನ್ನಡಿಯಾಗಿದೆ.

ದೋಸೆ ಮೂಲದ ಜನಪ್ರಿಯ ದಂತಕಥೆ
               ದೋಸೆಯನ್ನು ಮೊದಲು ಎಲ್ಲಿ ತಯಾರಿಸಲಾಗಿದೆ ಎಂದು ದೃಢೀಕರಿಸಲು ಸಾಧ್ಯವಾಗದಿದ್ದರೂ, ಉಡುಪಿಯ ಬ್ರಾಹ್ಮಣ ಅಡುಗೆಯವರು ದೋಸೆಯನ್ನು ರಚಿಸಿರಬಹುದು ಎಂದು ಸೂಚಿಸುವ ದಂತಕಥೆಯಿದೆ. ಬ್ರಾಹ್ಮಣರಿಗೆ ಆ ಕಾಲದಲ್ಲಿ ಮದ್ಯ ಸೇವಿಸಲು ಅವಕಾಶವಿರಲಿಲ್ಲ. ಆದರೆ, ಓರ್ವ ಬ್ರಾಹ್ಮಣ ಮಾತ್ರ ಮದ್ಯಪಾನ ಮಾಡಲು ಮತ್ತು ತಮ್ಮ ನಂಬಿಕೆಯ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದನು. ಬಳಿಕ ಆತ ಅಕ್ಕಿಯನ್ನು ಹುದುಗಿಸುವ ಮೂಲಕ ಮದ್ಯವನ್ನು ತಯಾರಿಸಲು ಪ್ರಯತ್ನಿಸಿದನು. ಆದರೆ ಅದರಲ್ಲಿ ವಿಫಲರಾಗಿ ಕೊನೆಗೆ ಅಕ್ಕಿ ಹಿಟ್ಟನ್ನು ಕಂಡುಹಿಡಿದು, ಬಿಸಿಯಾದ ಬಾಣಲೆಗೆ ಹಿಟ್ಟನ್ನು ಸುರಿದಾಗ ಪ್ರಪಂಚದ ಮೊದಲ ದೋಸೆ ರಚನೆಯಾಯಿತು ಎಂದು ಹೇಳಲಾಗಿದೆ.

ದೋಸೆ ಹೆಸರು ಬಂದಿದ್ದು ಹೇಗೆ?
               ದೋಸೆಗೆ ಈ ಹೆಸರು ಬರಲು ಕಾರಣವೇನೆಂದರೆ, ಮೊದಲು ದೋಸೆ ರಚಿಸಿದ ಬ್ರಾಹ್ಮಣನನ್ನು ಇನ್ನಿತರ ಬ್ರಾಹ್ಮಣರು 'ದೋಷ' ಅಥವಾ 'ಪಾಪ' ಮಾಡಿದನೆಂದು ಆರೋಪಿಸಿದರಂತೆ. ಹೀಗಾಗಿಯೇ ಈ ಖಾದ್ಯಕ್ಕೆ ಅದರ ದೋಷ ಎಂದು ಹೆಸರು ಬಂದಿತು. ಕಾಲಾನಂತರದಲ್ಲಿ ಬದಲಾವಣೆಯಾಗಿ ದೋಸೆ ಎಂಬ ಹೆಸರಿನಿಂದ ಜಗದ್ವಿಖ್ಯಾತವಾಗಿದೆ.

                  ದೋಸೆಯು ಕರ್ನಾಟಕ ಅಥವಾ ತಮಿಳುನಾಡಿನಿಂದಲೇ ಹುಟ್ಟಿಕೊಂಡಿರಲಿ, ತಿನ್ನಲು ಕಾದು ಕುಳಿತಿರುವಾಗ ಬಿಸಿ ಬಿಸಿಯಾದ ಹಾಗೂ ಗರಿ ಗರಿಯಾದ ದೋಸೆ ನಮ್ಮ ತಟ್ಟೆಗೆ ಬಿದ್ದಾಗ ನಾವು ಅದರ ಇತಿಹಾಸದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries