ಕೊರಾಪುಟ್: ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ಮೂವರು ವ್ಯಕ್ತಿಗಳಿಗೆ ಆಂಥ್ರಾಕ್ಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಮತ್ತು ಗುರುವಾರದ ನಡುವೆ ಲಕ್ಷ್ಮೀಪುರ ಬ್ಲಾಕ್‌ನಲ್ಲಿ ಈ ಮೂರು ಪ್ರಕರಣಗಳು ಕಂಡುಬಂದಿವೆ.
ಬ್ಯಾಸಿಲಸ್ ಆಂಥ್ರಾಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಆಂಥ್ರಾಕ್ಸ್ ಬರುತ್ತದೆ.
'ಮೂವರಲ್ಲಿ ಆಂಥ್ರಾಕ್ಸ್ ಪಾಸಿಟಿವ್ ಬಂದಿದ್ದು, ಅವರನ್ನು ಲಕ್ಷ್ಮೀಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆಂಥ್ರಾಕ್ಸ್ ಸೋಂಕಿತ ಜಾನುವಾರು ಕಳೇಬರದಿಂದ ಸೋಂಕು ಹರಡಿಬಹುದು'ಎಂದು ಕೊರಾಪುಟ್‌ನ ಹೆಚ್ಚುವರಿ ಜಿಲ್ಲಾ ಆರೋಗ್ಯ ಅಧಿಕಾರಿ ಸತ್ಯಸಾಯಿ ಸ್ವರೂಪ್ ಹೇಳಿದ್ದಾರೆ.
ಈ ಸಂಬಂಧ ಆಂಥ್ರಾಕ್ಸ್ ಪ್ರಕರಣಗಳು ಕಂಡುಬಂದಿರುವ ಕುತಿಂಗ ಹಳ್ಳಿಗೆ ಆರೋಗ್ಯ ತಜ್ಞರ ತಂಡವನ್ನು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸದ್ಯ, ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಈ ಸಂಬಂಧ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸ್ವರೂಪ್ ಹೇಳಿದ್ದಾರೆ.
'ಸೋಂಕು ಕಂಡುಬಂದಿರುವ ಪ್ರದೇಶಗಳಲ್ಲಿ ಮಾಹಿತಿ, ತಿಳುವಳಿಕೆ ಮತ್ತು ಸಂವಹನ(ಐಇಸಿ) ಕೇಂದ್ರಗಳನ್ನು ತೆರೆಯಲಾಗಿದೆ. ಪರಿಸ್ಥಿತಿ ಮೇಲೆ ನಿಕಟ ನಿಗಾ ಇಡಲಾಗಿದ್ದು, ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸ್ಥಿತಿ ಅವಲೋಕನಕ್ಕೆ ಸೂಕ್ತ ಪ್ರಮಾಣದ ಆರೋಗ್ಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ'ಎಂದೂ ಅವರು ತಿಳಿಸಿದ್ದಾರೆ.