ನಾಸಾ ವಿಶ್ವದ ಅತ್ಯಂತ ಪ್ರಭಾವಶಾಲಿ ಹಾಗೂ ಮಹತ್ವದ ಸಾಧನೆ ಮಾಡಿರುವ ಬಾಹ್ಯಾಕಾಶ ಸಂಸ್ಥೆಯಾಗಿದೆ ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಚಂದ್ರನ ಮೇಲೆ ಮಾನವರನ್ನು ಇಳಿಸಿ ಸಾಧನೆ ಮಾಡಿದ ಕೀರ್ತಿ ಸಹ ನಾಸಾಗೆ ಸೇರುತ್ತದೆ. ಇಡೀ ವಿಶ್ವವೇ ಒಮ್ಮೆ ಬಾಯಿ ಮೇಲೆ ಬೆರಳಿಟ್ಟು ಈ ವಿಸ್ಮಯವನ್ನು ಕಣ್ತುಂಬಿಕೊಂಡಿತ್ತು.
1969ರಲ್ಲಿ ನಾಸಾ ಈ ಸಾಧನೆ ಮಾಡಿ ಇಡೀ ವಿಶ್ವವೇ ಬೆರಗು ಕಣ್ಣಿನಿಂದ ನೋಡುವಂತೆ ಮಾಡಿತ್ತು. ಮಾನವ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟು ಚಂದ್ರನ ಅಂಗಳಲ್ಲಿ ಓಡಾಡಿದ್ದ, ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ.
ಈ ದಿನ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆಯಲಾಗಿತ್ತು. ಈ ಯೋಜನೆಯ ಬಳಿಕ ನಾಸಾ ಕೈಗೊಂಡಿದ್ದ ಮಾನವಯಾನ ಯೋಜನೆ ದುರಂತದಲ್ಲಿ ಅಂತ್ಯಗೊಂಡ ಬಳಿಕ ಇಂತಹ ಯೋಜನೆಗೆ ಕಡಿವಾಣ ಹಾಕಿತು. ಇನ್ನುಳಿದಂತೆ ನಾಸಾ ಇಂದಿಗೂ ಚಂದ್ರನ ಅಧ್ಯಯನ ನಡೆಯುತ್ತಲೇ ಇದೆ.
ನೀಲ್ ಆರ್ಮ್‌ಸ್ಟ್ರಾಂಗ್ ಅವರ ಮೂನ್ ಲ್ಯಾಂಡಿಂಗ್ ಕಳೆದ ಶತಮಾನದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಆದರೆ ಈ ಚಂದ್ರನ ಮೇಲೆ ಇಳಿದ ಘಟನೆಯೇ ಸುಳ್ಳು ಎಂಬ ವಾದವೊಂದು ಹುಟ್ಟಿಕೊಂಡಿದ್ದು ನಿಮಗೆ ನೆನೆಪಿದ್ಯಾ? ಹೌದು ಚಂದ್ರನ ಮೇಲೆ ನಾಸಾ ಮಾನವರನ್ನು ಇಳಿಸಿಯೇ ಇಲ್ಲ. ಇದೆಲ್ಲಾ ಸುಳ್ಳು ಒಂದು ಸ್ಟುಡಿಯೋದಲ್ಲಿ ಇದನ್ನೆಲ್ಲಾ ವಿಡಿಯೋ ಚಿತ್ರಿಕರಿಸಲಾಗಿದೆ ಎಂದು ವಾದ ಮಂಡಿಸಿದ್ದರು.
ಈ ವಾದ ಮಂಡಿಸಿದವರಲ್ಲಿ ನಾಸಾಗಾಗಿ ಕೆಲಸ ಮಾಡಿದ್ದ ವ್ಯಕ್ಯಿಯೇ ಪ್ರಮುಖವಾಗಿದ್ದ. 1960 ಮತ್ತು 1963ರ ನಡುವೆ ಯುಎಸ್ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದ ಬಿಲ್ ಕೇಸಿಂಗ್ ಮೊಟ್ಟ ಮೊದಲ ಬಾರಿಗೆ ಈ ಚಂದ್ರಯಾನ ಮತ್ತು ಮೂನ್ ಲ್ಯಾಂಡಿಂಗ್ ಒಂದು ಸುಳ್ಳು ಪ್ರಚಾರ ಎಂದು ಕರೆದಿದ್ದ. ಈ ಹೇಳಿಕೆ ಬಳಿಕ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು.
ಬಿಲ್ ಕೇಸಿಂಗ್ ಚಂದ್ರನ ಬಳಿ ಮಾನವರ ಹೊತ್ತೊಯ್ದ ರಾಕೆಟ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇದು ಆರ್ಮ್‌ಸ್ಟ್ರಾಂಗ್ ಮತ್ತು ಆಲ್ಡ್ರಿನ್ ಅವರನ್ನು ಚಂದ್ರನತ್ತ ಕರೆದೊಯ್ದ ಸ್ಯಾಟರ್ನ್ ವಿ ರಾಕೆಟ್ ಅನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿದ ಕಂಪನಿಯ ಉದ್ಯೋಗಿಯಾಗಿದ್ದ.
ಬಿಲ್ ಕೇಸಿಂಗ್ ಕೆಲವು ಅತಿರೇಕದ ಸಿದ್ಧಾಂತಗಳನ್ನು ಒಳಗೊಂಡಿರುವ ಕರಪತ್ರವನ್ನು ಸ್ವಯಂ ಆತನೇ ಪ್ರಕಟಿಸಿದ್ದ. 'ವಿ ನೆವರ್ ವೆಂಟ್ ಟು ದಿ ಮೂನ್: ಅಮೇರಿಕಾಸ್ ಥರ್ಟಿ ಬಿಲಿಯನ್ ಡಾಲರ್ ಸ್ವಿಂಡಲ್' ಎಂಬ ಕರಪತ್ರವನ್ನು ಹೊರಡಿಸಿದ. ಇದು ಅಮೆರಿಕ ಮಾತ್ರವಲ್ಲ ಇಡೀ ಜಗತ್ತಿನಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ಈ ರೀತಿ ಆರೋಪಿಸುವುದರ ಜೊತೆಗೆ ಒಂದಿಷ್ಟು ಪ್ರಶ್ನೆಗಳನ್ನು ನಾಸಾದ ಮುಂದಿಟ್ಟಿದ್ದ. ಚಂದ್ರನ ಮೇಲೆ ಇಳಿದಾಗ ಅಲ್ಲಿ ನಕ್ಷತ್ರಗಳು ಏಕೆ ಕಾಣಿಸಲಿಲ್ಲ. ಚಂದ್ರನ ಮೇಲೆ ಇಳಿದಾಗ ಅಲ್ಲಿ ನೆರಳು ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ಗ್ರಹಿಸಿಕೊಳ್ಳಿ;. ಅಲ್ಲದೆ ಲ್ಯಾಂಡಿಂಗ್ ಮಾಡ್ಯೂಲ್ ಅಡಿಯಲ್ಲಿ ಯಾವುದೇ ಬ್ಲಾಸ್ಟ್ ಕ್ರೇಟರ್ ಇಲ್ಲ ಲ್ಯಾಂಡರ್ ಇಳಿದಾಗ ಅದರಿಂದ ಧೂಳಿನ ಕಣಗಳು ಹಾರುತ್ತಿರುವುದು ನಮಗೆ ಕಾಣಿಸುವುದೇ ಇಲ್ಲ ಏಕೆ ಎಂದು ಪ್ರಶ್ನಿಸಿದ್ದರು.
ಆದರ ಅವರ ವಾದವನ್ನು ನಾಸಾ ವಿಜ್ಞಾನಿಗಳು ತಳ್ಳಿ ಹಾಕಿದ್ದರು. ಆತ ಕೇವಲ ಪ್ರಚಾರಕ್ಕಾಗಿ ಈ ರೀತಿ ಆರೋಪಿಸಿದ್ದಾನೆ ಎಂದು ದೂರಿದರು. ಜೊತೆಗೆ ಅಮೆರಿಕ ಯಾವುದೇ ದೊಡ್ಡ ಮಟ್ಟದ ಸಾಧನೆ ಮಾಡಿದರೂ ಅಲ್ಲಿ ಪ್ರಶ್ನೆಗಳ ಇಟ್ಟು ಅದನ್ನು ಅನುಮಾನದಿಂದ ನೀಡುವ ಅಭ್ಯಾಸ ಹಿಂದಿನಿಂದ ನಡೆದು ಬಂದಿದೆ ಎಂದು ನಾಸಾ ಪ್ರತ್ಯುತ್ತರ ನೀಡಿತ್ತು.