ಕಿನ್ಶಾಸಾ: ಕಾಂಗೊ ಗಣರಾಜ್ಯದ (ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ) ಆಡಳಿತಾರೂಢ ಸರ್ಕಾರವನ್ನು ಉರುಳಿಸಲು ಭಾನುವಾರ ನಸುಕಿನಲ್ಲಿ ನಡೆಸಿರುವ ದಂಗೆಯನ್ನು ವಿಫಲಗೊಳಿಸಲಾಗಿದ್ದು, ಹಲವು ಮಂದಿ ದಂಗೆಕೋರರನ್ನು ಬಂಧಿಸಲಾಗಿದೆ ಎಂದು ಕಾಂಗೊ ಸೇನೆ ಹೇಳಿದೆ.
ಕಿನ್ಶಾಸಾ: ಕಾಂಗೊ ಗಣರಾಜ್ಯದ (ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ) ಆಡಳಿತಾರೂಢ ಸರ್ಕಾರವನ್ನು ಉರುಳಿಸಲು ಭಾನುವಾರ ನಸುಕಿನಲ್ಲಿ ನಡೆಸಿರುವ ದಂಗೆಯನ್ನು ವಿಫಲಗೊಳಿಸಲಾಗಿದ್ದು, ಹಲವು ಮಂದಿ ದಂಗೆಕೋರರನ್ನು ಬಂಧಿಸಲಾಗಿದೆ ಎಂದು ಕಾಂಗೊ ಸೇನೆ ಹೇಳಿದೆ.
ರಾಜಧಾನಿ ಕಿನ್ಶಾಸಾದಲ್ಲಿ ಹಲವಾರು ವಿದೇಶಿಯರನ್ನು ಒಳಗೊಂಡಂತೆ, ಸೇನಾ ಸಮವಸ್ತ್ರದಲ್ಲಿದ್ದ ಶಸ್ತ್ರಧಾರಿಗಳು ಮತ್ತು ಕಾಂಗೊ ಅಧ್ಯಕ್ಷರ ಅಂಗರಕ್ಷಕರ ನಡುವಿನ ಗುಂಡಿನ ಚಕಮಕಿಯ ವೇಳೆ ಮೂರು ಜನರು ಹತರಾಗಿದ್ದಾರೆ.
'ದಂಗೆಯ ಯತ್ನವನ್ನು ಕಾಂಗೊದ ರಕ್ಷಣಾ ಮತ್ತು ಭದ್ರತಾ ಪಡೆಗಳು ಹತ್ತಿಕ್ಕಿವೆ. ಪರಿಸ್ಥಿತಿಯು ನಿಯಂತ್ರಣದಲ್ಲಿದೆ' ಎಂದು ಕಾಂಗೊ ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ಸಿಲ್ವೈನ್ ಎಕೆಂಗೆ ಅವರು ನೀಡಿರುವ ಹೇಳಿಕೆಯನ್ನು ಸರ್ಕಾರದ ಸುದ್ದಿ ವಾಹಿನಿ ಭಾನುವಾರ ಪ್ರಸಾರ ಮಾಡಿದೆ.
ಕಿನ್ಶಾರಾದಲ್ಲಿ ನಸುಕಿನ 4.30ರ ಸುಮಾರಿಗೆ ಕಾಂಗೊದ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಭ್ಯರ್ಥಿ ವೈಟಲ್ ಕಮರ್‌ಹಿ ಅವರ ನಿವಾಸದ ಮೇಲೆ ಮಿಲಿಟರಿ ಸಮವಸ್ತ್ರದಲ್ಲಿದ್ದ ಬಂಡುಕೋರರು ದಾಳಿ ನಡೆಸಿದರು. ಅವರನ್ನು ಭದ್ರತಾ ಸಿಬ್ಬಂದಿ ತಡೆದಾಗ ಇಬ್ಬರು ಪೊಲೀಸರು ಸಾವಿಗೀಡಾಗಿದ್ದು, ಒಬ್ಬ ದಾಳಿಕೋರ ಹತನಾಗಿದ್ದಾನೆ. ಸದ್ಯ ಕಮರ್‌ಹಿ ಮತ್ತವರ ಕುಟುಂಬದವರು ಸುರಕ್ಷಿತವಾಗಿದ್ದು, ಅವರಿಗೆ ಸೇನೆ ಹೆಚ್ಚಿನ ಭದ್ರತೆ ಒದಗಿಸಿದೆ ಎಂದು ವೈಟಲ್ ಅವರ ವಕ್ತಾರ ಮೈಕೆಲ್ ಮೋಟೊ ಮುಹಿಮ ಹೇಳಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಕಾಂಗೊ ಅಧ್ಯಕ್ಷ ಫೀಲಿಕ್ಸ್ ಶಿಸೆಕಿಡಿ ಅವರು ಮೈತ್ರಿ ಪಕ್ಷಗಳ ಸಂಸದರೊಂದಿಗೆ ಚರ್ಚೆ ಕೂಡ ನಡೆಸಿದ್ದರು. ಸ್ಪೀಕರ್ ಆಯ್ಕೆ ಸಂಬಂಧ ಬಿಕ್ಕಟ್ಟು ಮುಂದುವರಿದರೆ, ಸಂಸತ್ತನ್ನು ವಿಸರ್ಜಿಸಿ ಪುನಃ ಚುನಾವಣೆ ಎದುರಿಸಲೂ ಹಿಂಜರಿಯುವುದಿಲ್ಲ ಎಂದಿದ್ದರು. ಶನಿವಾರ ನಿಗದಿಯಾಗಿದ್ದ ಸಂಸತ್ ಸ್ಥಾನದ ಚುನಾವಣೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು.