ಕಾಸರಗೋಡು: ಜಿಲ್ಲೆಯ ಮೂರು ನಗರಸಭೆ, ಗ್ರಾಮ ಪಂಚಾಯಿತಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಳೆಗಾಲ ಪೂರ್ವ ಸ್ವಚ್ಛತಾ ಆಂದೋಲನದ ಅಂಗವಾಗಿ ಶುಚೀಕರಣ ಕಾರ್ಯ ಭಾನುವಾರ ನಡೆಯಿತು. ಹಸಿರು ಕ್ರಿಯಾಸೇನೆ, ಎಂ.ಜಿ.ಎನ್.ಆರ್.ಇ.ಜಿಎಸ್ ಕಾರ್ಯಕರ್ತರು, ಎನ್ನೆಸ್ಸೆಸ್ ಸ್ವಯಂಸೇವಕರು ಹಾಗೂ ಸಾರ್ವಜನಿಕರು ಶುಚೀಕರಣ ಕಾರ್ಯದಲ್ಲಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದಲ್ಲಿ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳು ನವಕೇರಳ ಮಿಷನ್ ಕ್ರಿಯಾ ಯೋಜನೆ ಹಾಗೂ ಜಿಲ್ಲಾ ಸ್ವಚ್ಛತಾ ಮಿಷನ್ ಸೂಚನೆ ಮೇರೆಗೆ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಪಂಚಾಯಿತಿಗಳಲ್ಲಿ ಮುಂದಿನ ದಿನಗಳಲ್ಲೂ ಸ್ವಚ್ಛತಾ ಕಾರ್ಯ ಮುಮದುವರಿಯಲಿದೆ. ಸಾರ್ವಜನಿಕ ಸ್ಥಳವನ್ನು ಸ್ವಚ್ಛಗೊಳಿಸಿದ ನಂತರ ಮನೆಗಳಲ್ಲಿ ಡ್ರೈ ಡೇ ಆಚರಿಸಲಾಗುತ್ತದೆ. ಎಲ್ಲಾ ಶಾಲೆಗಳಲ್ಲಿ ಬೇಸಿಗೆ ರಜೆ ಕಳೆದು ಶಾಲೆ ಪುನಾರಂಭಗೊಳ್ಳುವ ಮೊದಲು ಶುಚೀಕರಣ ಕಾರ್ಯ ನಡೆಯಲಿರುವುದು. ಆರೋಗ್ಯ ಜಾಗೃತಿ ಅಭಿಯಾನದ ಅಂಗವಾಗಿ ಮುಂಗಾರು ಪೂರ್ವ ಸ್ವಚ್ಛತೆ ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛತಾ ಆಂದೋಲನ ನಡೆಸುವ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಸ್ಥಳೀಯಾಡಳಿತ ಸಂಸ್ಥೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು
ಮೇ 7ರ ವರೆಗೆ ಹಾಗೂ ರಜಾದಿನಗಳಲ್ಲು ಆಂದೋಲನ ಮುಂದುವರಿಯಲಿದ್ದು, ಮಾರುಕಟ್ಟೆ, ರಸ್ತೆ, ಜಲಮೂಲ, ಕಚೇರಿ, ಮನೆಗಳನ್ನು ಸ್ವಚ್ಛಗೊಳಿಸಿ ಡ್ರೈ ಡೇ ಆಚರಿಸಲು ಈಗಾಘಲೇ ತೀರ್ಮಾನಿಸಲಾಗಿದೆ. ಜಿಲ್ಲೆಯ ಮೊದಲ ದಿನ ಮೂರು ನಗರಸಭೆಗಳು ಮತ್ತು 30 ಗ್ರಾಮ ಪಂಚಾಯಿತಿಗಳ ಸುಮಾರು 500 ಕೇಂದ್ರಗಳನ್ನು ವಾರ್ಡ್ ಮಟ್ಟದ ಶುಚಿತ್ವ ಸಮಿತಿ ವತಿಯಿಂದ ಸಾಮೂಹಿಕವಾಗಿ ಸ್ವಚ್ಛಗೊಳಿಸಲಾಯಿತು.
ಅಜಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಶುಚೀಕರಣ ನಡೆಸುವ ಮೂಲಕ ಮುಂಗಾರು ಪೂರ್ವ ಸ್ವಚ್ಛತಾ ಆಂದೋಲನ ನಡೆಸಲಾಯಿತು.