ನವದೆಹಲಿ: ನ್ಯೂಸ್‌ಕ್ಲಿಕ್ ಸುದ್ದಿತಾಣದ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರ ವಿರುದ್ಧ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯನ್ನು ಗಮನಕ್ಕೆ ತೆಗೆದುಕೊಂಡಿರುವ ದೆಹಲಿಯ ನ್ಯಾಯಾಲಯವೊಂದು, ಆರೋಪಿಯ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಇವೆ ಎಂದು ಹೇಳಿದೆ.

ಈ ಸುದ್ದಿತಾಣವು ಚೀನಾ ಪರವಾಗಿ ಪ್ರಚಾರಾಂದೋಲನ ನಡೆಸಲು ಹಣ ಪಡೆದಿದೆ ಎಂಬ ಆರೋಪಗಳ ಕುರಿತು 'ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ' (ಯುಎಪಿಎ) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಹರದೀಪ್ ಕೌರ್ ಅವರು, ದೋಷಾರೋಪಪಟ್ಟಿಯ ಪ್ರತಿಯೊಂದನ್ನು ಪುರಕಾಯಸ್ಥ ಅವರಿಗೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಸೂಚಿಸಿದ್ದಾರೆ.
ದೋಷಾರೋಪ ನಿಗದಿ ವಿಚಾರವಾಗಿ ವಾದ-ಪ್ರತಿವಾದಕ್ಕೆ ನ್ಯಾಯಾಧೀಶರು ಮೇ 31ಕ್ಕೆ ದಿನ ನಿಗದಿ ಮಾಡಿದ್ದಾರೆ. ನ್ಯೂಸ್‌ಕ್ಲಿಕ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರಿಗೆ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಜನವರಿಯಲ್ಲಿ ಒಪ್ಪಿಗೆ ನೀಡಲಾಗಿದೆ.
ದೆಹಲಿಯ ಪೊಲೀಸರ ವಿಶೇಷ ಘಟಕವು ಚಕ್ರವರ್ತಿ ಮತ್ತು ಪುರಕಾಯಸ್ಥ ಅವರನ್ನು ಅಕ್ಟೋಬರ್‌ನಲ್ಲಿ ಬಂಧಿಸಿದೆ. ಇಬ್ಬರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ, 'ಭಾರತದ ಸಾರ್ವಭೌಮತ್ವವನ್ನು ಹಾಳುಮಾಡಲು' ಮತ್ತು ದೇಶದ ವಿರುದ್ಧ ಅತೃಪ್ತಿ ಸೃಷ್ಟಿಸಲು ಭಾರಿ ಪ್ರಮಾಣದ ಹಣವು ಚೀನಾದಿಂದ ಈ ಸುದ್ದಿತಾಣಕ್ಕೆ ಬಂದಿದೆ ಎಂದು ಹೇಳಲಾಗಿದೆ.