ಟೆಹರಾನ್: ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತಪಟ್ಟಿರುವುದು ದೃಢಪಟ್ಟಿದೆ. ಸಂಪೂರ್ಣ ಸುಟ್ಟ ಹೆಲಿಕಾಪ್ಟರ್‍ನಲ್ಲಿ ಯಾರೂ ಜೀವಂತವಾಗಿ ಉಳಿದಿಲ್ಲ ಎಂದು ಇರಾನ್ ರೆಡ್ ಕ್ರೆಸೆಂಟ್ ಅಧಿಕಾರಿಗಳು ಈ ಹಿಂದೆ ಮಾಹಿತಿ ನೀಡಿದ್ದರು. ಬಳಿಕ ಇದೀಗ ಕೆಲವು ಗಂಟೆಗಳ ಮೊದಲಷ್ಟೇ ಸಾವಿನ ಸುದ್ದಿ ಹೊರಬಿದ್ದಿದೆ.
ಅಪಘಾತದಲ್ಲಿ ಇಬ್ರಾಹಿಂ ರೈಸಿ ಅವರೊಂದಿಗೆ ವಿದೇಶಾಂಗ ಸಚಿವ ಅಮೀರ್ ಅಬ್ದುಲ್ಲಾಹಿಯಾನ್ ಕೂಡ ಸಾವನ್ನಪ್ಪಿದ್ದಾರೆ. ಪೂರ್ವ ಅಜರ್‍ಬೈಜಾನ್‍ನ ಜೋಫಾದಲ್ಲಿ ಭಾನುವಾರ ಅಪಘಾತ ಸಂಭವಿಸಿದೆ. ಅಜೆರ್ಬೈಜಾನ್ ಗಡಿಯಲ್ಲಿರುವ ಅರಸ್ ನದಿಯ ಮೇಲೆ ಎರಡು ಅಣೆಕಟ್ಟುಗಳನ್ನು ಉದ್ಘಾಟಿಸಿದ ನಂತರ ರೈಸಿ ವಾಯವ್ಯ ಇರಾನಿನ ತಬ್ರಿಜ್ ನಗರಕ್ಕೆ ಹಿಂತಿರುಗುತ್ತಿದ್ದರು.
ಅವರ ಬೆಂಗಾವಲು ಪಡೆಯಲ್ಲಿ ಮೂರು ಹೆಲಿಕಾಪ್ಟರ್‍ಗಳು ಇದ್ದವು ಮತ್ತು ಎರಡು ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪಿವೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಾಷ್ಟ್ರಪತಿ, ವಿದೇಶಾಂಗ ಸಚಿವರು ಹಾಗೂ ಸ್ಥಳೀಯ ಅಧಿಕಾರಿಗಳಿದ್ದ ಹೆಲಿಕಾಪ್ಟರ್ ಬಂದಿಲ್ಲ ಎಂದು ಇನ್ನೊಂದು ಮಾಧ್ಯಮ ‘ಶಾರ್ಗ್’ ವರದಿ ಮಾಡಿತ್ತು.
1960 ರಲ್ಲಿ ಜನಿಸಿದ ರೈಸಿ ಅವರು ಟೆಹ್ರಾನ್‍ನ ಪ್ರಾಸಿಕ್ಯೂಟರ್ ಜನರಲ್, ಕಾನೂನು ವ್ಯವಹಾರಗಳ ವಿಭಾಗದ ಉಪ ಮುಖ್ಯಸ್ಥ ಮತ್ತು ದೇಶದ ಪ್ರಾಸಿಕ್ಯೂಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ನಂತರ ಅಧ್ಯಕ್ಷರಾದರು. ಅವರು ಇರಾನ್‍ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮೆದುಳಿನ ಕೂಸು.